- ಕೋಟೆ ಪ್ರದೇಶ, ರಾಜೀವ್ ಗಾಂಧಿ ಬಡಾವಣೆ, ಲಕ್ಷ್ಮೀಶ ನಗರಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ
ರಾಜ್ಯ ಸರ್ಕಾರದಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ 15 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಈ ಮೂಲಕ ನಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಮತ್ತೆ ಹಿಂದಿನ ವೈಭವ ಮರುಕಳಿಸಲಿವೆ ಎಂದು ಶಾಸಕ ಕೆ.ಎಸ್.ಆನಂದ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಿವಿಧ ಪ್ರದೇಶಗಳಾದ ಕೋಟೆ ಪ್ರದೇಶ, ರಾಜೀವ್ ಗಾಂಧಿ ಬಡಾವಣೆ ಹಾಗೂ ಲಕ್ಷ್ಮೀಶ ನಗರಗಳಲ್ಲಿ ಒಟ್ಟು ಮೂರು ಕಡೆಗಳಲ್ಲಿ ತಲಾ 20 ಲಕ್ಷ ರು. ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದರು.ಬಹು ಮುಖ್ಯವಾಗಿ ರಾಜ್ಯದ ಸರ್ಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು, ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಸರ್ಕಾರ ಪರಿಕಲ್ಪನೆಯಂತೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ 3 ಸಾವಿರ ಇಂಗ್ಲೀಷ್ ಮಾದ್ಯಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಗಳು ಆರಂಭವಾಗಲಿವೆ. ಇದರಲ್ಲಿ ನನ್ನ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 15 ಶಾಲೆಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.
ಪುರಸಭೆ ಸದಸ್ಯ ತೋಟದಮನೆ ಮೋಹನ್ ಮಾತನಾಡಿ ಪುರಸಭೆಯಿಂದ ಈ ನೂತನ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ಸೂಕ್ತ ಜಾಗವನ್ನೂ ನೀಡಲಾಗಿದ್ದು ಸ್ಥಳೀಯ ಸಣ್ಣ ಮಕ್ಕಳ ಶಿಕ್ಷಣಕ್ಕೆ ಶಾಸಕರು ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಸದಸ್ಯರಾದ ಸಯ್ಯದ್ ಯಾಸೀನ್, ಮಂಡಿ ಇಕ್ಬಾಲ್, ಲತಾರಾಜು, ಮೋಹನ್, ಸಿಡಿಪಿಓ ಶಿವಪ್ರಕಾಶ್, ಕೆಆರ್ ಐಡಿಎಲ್ ನ ಜಿಲ್ಲಾಧಿಕಾರಿ ಅಶ್ವಿನಿ, ಗಿರೀಶ್, ಮತ್ತಿತರರು ಹಾಜರಿದ್ದರು.24ಕೆಕೆಡಿಯು2.
ಶಾಸಕ ಕೆ.ಎಸ್.ಆನಂದ್ ಕಡೂರಿನ ಕೋಟೆ , ರಾಜೀವ್ ಗಾಂಧಿ ಬಡಾವಣೆ, ಲಕ್ಷ್ಮೀಶ ನಗರಗಳಲ್ಲಿ ತಲಾ 20 ಲಕ್ಷರೂ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿದರು.