ಕಲಘಟಗಿ:
ಗ್ರಾಹಕ ಸೇವಾ ಕೇಂದ್ರಕ್ಕೆ ನಿತ್ಯ ಮಹಿಳಾ ಸಂಘ, ಇಎಂಐ, ವಿಧವಾ ವೇತನ, ವಯೋ ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಹಣ ವರ್ಗಾವಣೆ, ಮರುಪಾವತಿ ಹೀಗೆ ಹತ್ತು ಹಲವು ಮೂಲಗಳಿಂದ ಬಂದ ಹಣವನ್ನು ಎಸ್‌ಬಿಐನಲ್ಲಿ ಉಳಿತಾಯ ಖಾತೆಗೆ ಜಮೆಯಾಗುತ್ತಿತ್ತು. ಗ್ರಾಹಕರು ತಮ್ಮ ಖಾತೆಯಲ್ಲಿನ ಹಣ ಜಮಾ ಹಾಗೂ ಪಾವತಿಸಲು ಬಂದಾಗ ಬ್ಯಾಂಕ್‌ನವರು ಗ್ರಾಹಕ ಸೇವಾ ಕೇಂದ್ರಕ್ಕೆ ಕಳಿಸಿ ಕೊಡುತ್ತಿದ್ದರು. ಆದರೆ, ಕೇಂದ್ರದ ಪ್ರತಿನಿಧಿ ಹಲವು ತಿಂಗಳಿಂದ ಜನರ ಹೆಬ್ಬೆರಳು ಒತ್ತಿಸಿಕೊಂಡು ಅವರ ಖಾತೆಯಿಂದ ಮನಸಿಗೆ ತೋಚಿದಷ್ಟು ಹಣ ತೆಗೆದುಕೊಂಡು ಗ್ರಾಹಕರಿಗೆ ವಂಚಿಸಿದ ದೂರುಗಳು ಕೇಳಿ ಬಂದಿವೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆಕೈಗೊಂಡಿದ್ದಾರೆ.
ಬ್ಯಾಂಕಿಗೆ ದೂರು:ಮೋಸಕ್ಕೆ ಒಳಗಾದ 50ಕ್ಕೂ ಹೆಚ್ಚಿನ ಗ್ರಾಹಕರಿಂದ ಅಂದಾಜು ₹ 14.50 ಲಕ್ಷ ವಂಚನೆಯಾಗಿದೆ ಎಂದು ಸಂತ್ರಸ್ತರು ಅರ್ಜಿ ಮೂಲಕ ಬ್ಯಾಂಕ್ ಗೆ ದೂರು ಸಲ್ಲಿಸಿದ್ದಾರೆ. 8 ದಿನಗಳಲ್ಲಿ ನಮ್ಮ ಹಣ ಮರಳಿ ಖಾತೆಗೆ ಜಮೆ ಮಾಡದಿದ್ದರೆ ಬ್ಯಾಂಕ್ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಹಕರು ಎಚ್ಚರಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ವಿ.ಎನ್. ಮುರಕುಂಬಿ, ಫಕೀರೇಶ ವಾಲಿಕಾರ, ಬಸವರಾಜ ಹಟಗಾರ, ರತ್ನವ್ವ ಶಿವಳ್ಳಿ, ಎಂ.ಬಿ. ಅಂಗಡಿ, ಆರ್.ವಿ. ಪತಂಗಿ, ಕೆ.ಎ. ಮುತ್ತಗಿ, ಚನ್ನಬಸಪ್ಪ ದೊಡ್ಡಮನಿ, ಸಹದೇವಪ್ಪ ಹರಿಜನ, ಆಣಂದ ಗೌಳಿ, ರಾಜು ಲಮಾಣಿ, ಶಿವವು ಕೆ, ಇಸ್ಮಾಯಿಲ್, ರವಿ, ಸೇರಿದಂತೆ ವಿವಿಧ ಗ್ರಾಮದ ಗ್ರಾಹಕರು ಇದ್ದರು.ಹಣ ಕಳೆದುಕೊಂಡ ಗ್ರಾಹಕರು ದೂರು ಸಲ್ಲಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು 90 ದಿನದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಹಳ್ಳೂರ ಹೇಳಿದರು.