ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಜಗದೀಶ ಅಂಗಡಿ ವಿ. ಅವರು ಭೌತಶಾಸ್ತ್ರದ ವಿಷಯಗಳಲ್ಲಿ ಸಂಶೋಧನೆ ಮಾಡುವ ಮೂಲಕ 10 ಪೇಟೆಂಟ್ ಪಡೆದಿದ್ದಾರೆ. ಇವರೊಂದಿಗೆ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಡಾ. ಎನ್. ರಾಘವೇಂದ್ರ ಅವರು 5 ಪೇಟೆಂಟ್‌ಗಳನ್ನು ಪಡೆದುಕೊಂಡಿರುವುದಾಗಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.
ಹೂಮಿಡಿಟಿ ಸೆನ್ಸರ್, ದುರ್ಲಭ ಭೂತತ್ವ ಪದಾರ್ಥಗಳಿಂದ ಡೋಪ್ ಮಾಡಿದ ಪಿಗ್ನಂಟ್‌ಗಳು, ಸೂಪರ್ ಕ್ಯಾಪಾಸಿಟರ್ ಪರೀಕ್ಷಾ ಸಾಧನ, ಹೆಟರೋಜಂಕ್ಷನ್ ಪೋಟೋಕ್ಯಾಟಲಿಸ್ಟ್ ಸೇರಿದಂತೆ ವಿವಿಧ ವಿಷಯಗಳ ಮೇಲೆ 15 ಪೇಟೆಂಟ್‌ಗಳನ್ನು ಇಬ್ಬರೂ ಸಂಶೋಧಕರು ಪಡೆದುಕೊಂಡಿದ್ದಾರೆ ಎಂದರು.
ಡಾ. ಜಗದೀಶ ಅಂಗಡಿ ಅವರು 164ಕ್ಕೂ ಹೆಚ್ಚು ಹಾಗೂ ಡಾ. ಎನ್. ರಾಘವೇಂದ್ರ ಅವರು ಸಹ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಂಶೋಧನೆಗಾಗಿ ಕೇಂದ್ರ ಸರ್ಕಾರದಿಂದ ₹18 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ₹10 ಲಕ್ಷ ಅನುದಾನ ಬಂದಿದೆ. ಕಾಲೇಜಿನಲ್ಲಿ ಒಂದು ರಿಸರ್ಚ್ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಬಿಎಸ್ಸಿ ಹಾಗೂ ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.298 ವಿದ್ಯಾರ್ಥಿಗಳು ಹಾಗೂ 11 ಪ್ರಾಧ್ಯಾಪಕರಿಂದ ಆರಂಭವಾದ ಕಾಲೇಜಿನಲ್ಲಿ ಪ್ರಸ್ತುತ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದಾರೆ. ಪಿಎಚ್‌ಡಿ ಪದವಿ ಪಡೆದ 34ಕ್ಕೂ ಹೆಚ್ಚು ಬೋಧಕರಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಎನ್ಐಆರ್‌ಎಫ್ ಇಲಾಖೆಯಿಂದ ರಾಷ್ಟ್ರೀಯ ಮಟ್ಟದ ಕಾಲೇಜುಗಳಲ್ಲಿ ನಮ್ಮ ಕಾಲೇಜು 89ನೇ ರ್‍ಯಾಂಕ್ ಪಡೆದಿದ್ದು, ರಾಜ್ಯಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಉತ್ತಮ ಸಂಶೋಧನಾ ಪ್ರಯೋಗಾಲಯ, ಗ್ರಂಥಾಲಯ, ಐಐಟಿ ಆಧಾರಿತ ಉಪಕರಣಗಳ ಕಲಿಕಾ ಸೌಲಭ್ಯದ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ವೃತ್ತಿಪರತೆಗೆ ಅನುಕೂಲವಾಗುವ 32 ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ಒಳಗೊಂಡಿದೆ. ವಿವಿಧ ಕಂಪನಿಗಳಲ್ಲಿ ಶೇ. 34ರಷ್ಟು ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಜಗದೀಶ ಅಂಗಡಿ, ಎನ್. ರಾಘವೇಂದ್ರ ಅವರು, ಸಂಶೋಧನೆ ಹಾಗೂ ಪೇಟೆಂಟ್ ವಿಷಯಗಳ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಲಿಂಗರಾಜ ಡಿ. ಹೊರಕೇರಿ, ವಿ.ಆರ್. ವಾಘಮೋಡೆ, ಮಹಾಂತೇಶ ಎಂ, ಬಿ.ಎಸ್. ಮಾಳವಾಡ ಸೇರಿದಂತೆ ಹಲವರಿದ್ದರು.