ದುಬೈನಲ್ಲಿ ಒಂದೇ ಕುಟುಂಬದ 15 ಜನರು ಲಾಕ್

KannadaprabhaNewsNetwork |  
Published : Mar 03, 2026, 01:45 AM IST
ದುಬೈನಲ್ಲಿ ಸಿಲುಕಿರುವ ಬಳ್ಳಾರಿಯ ಪ್ರವಾಸಿಗರಿಗೆ ದುಬೈ ಕನ್ನಡ ಸಂಘ ಹಾಗೂ ಶಾಸಕ ನಾಗೇಂದ್ರ ಸ್ನೇಹಿತರು ಆರೋಗ್ಯ ತಪಾಸಣೆ ಮಾಡಿಸಿದರು.  | Kannada Prabha

ಸಾರಾಂಶ

ದುಬೈನಲ್ಲಿ ಬಳ್ಳಾರಿಯ ಒಂದೇ ಕುಟುಂಬದ 15 ಜನರು ಸಿಲುಕಿಕೊಂಡಿದ್ದು, ಸುರಕ್ಷಿತ ತಾಣವಾದ ಗ್ರಾಮೀಣ ಪ್ರದೇಶವೊಂದರಲ್ಲಿ ಇರಿಸಲಾಗಿದೆ. ದುಬೈನಲ್ಲಿ ಶೆಲ್ ದಾಳಿಯಾಗುತ್ತಿರುವುದರಿಂದ ಪ್ರವಾಸಿಗರು ತೀವ್ರ ಆತಂಕಗೊಂಡಿದ್ದಾರೆ.

ಬಳ್ಳಾರಿ: ದುಬೈನಲ್ಲಿ ಬಳ್ಳಾರಿಯ ಒಂದೇ ಕುಟುಂಬದ 15 ಜನರು ಸಿಲುಕಿಕೊಂಡಿದ್ದು, ಸುರಕ್ಷಿತ ತಾಣವಾದ ಗ್ರಾಮೀಣ ಪ್ರದೇಶವೊಂದರಲ್ಲಿ ಇರಿಸಲಾಗಿದೆ.

ದುಬೈ ಕನ್ನಡಿಗರ ಸಂಘದ ಪದಾಧಿಕಾರಿಗಳು ಬಳ್ಳಾರಿ ಸೇರಿದಂತೆ ಕರ್ನಾಟಕದಿಂದ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವವರ ನೆರವಿಗೆ ಮುಂದಾಗಿದ್ದಾರೆ. ಬಳ್ಳಾರಿ ನಗರ ಶಾಸಕ ಹಾಗೂ ಗ್ರಾಮೀಣ ಶಾಸಕರು ನಿರಂತರವಾಗಿ ಪ್ರವಾಸಿಗರ ಜತೆ ಸಂಪರ್ಕದಲ್ಲಿದ್ದು, ಧೈರ್ಯ ತುಂಬುತ್ತಿದ್ದಾರೆ. ಆದಾಗ್ಯೂ ದುಬೈನಲ್ಲಿ ಲಾಕ್ ಆಗಿರುವ ಬಳ್ಳಾರಿಯ ಪ್ರವಾಸಿಗರು ದಿನದಿನಕ್ಕೆ ಆತಂಕ ಎದುರಿಸುತ್ತಿದ್ದಾರೆ.

ದುಬೈನಲ್ಲಿ ಶೆಲ್ ದಾಳಿಯಾಗುತ್ತಿರುವುದರಿಂದ ಪ್ರವಾಸಿಗರು ತೀವ್ರ ಆತಂಕಗೊಂಡಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ಶೆಲ್ ದಾಳಿಯ ಸದ್ದು ಕೇಳಿಸುತ್ತಿರುವುದು ಜೀವಭಯದ ದುಗುಡ ಶುರುವಾಗಿದೆ. ಕೇಂದ್ರ ಸರ್ಕಾರ ತಮ್ಮನ್ನು ಸುರಕ್ಷತೆಯಿಂದ ಕರಿಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಯಾವುದೇ ಆತಂಕಪಡಬೇಡಿ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿ ಧೈರ್ಯ ತುಂಬಿದ್ದಾರೆ. ಇದಲ್ಲದೆ, ದುಬೈನಲ್ಲಿ ವಾಸವಾಗಿರುವ ಅನೇಕ ಕನ್ನಡ ಉದ್ಯಮಿಗಳು ಕರ್ನಾಟಕದ ಪ್ರವಾಸಿಗರನ್ನು ಭೇಟಿ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುತ್ತಿರುವುದರಿಂದ ಒಂದಷ್ಟು ನಿರಾಳಗೊಳ್ಳುವಂತಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.ಜಿಲ್ಲೆಯಿಂದ ದುಬೈನಲ್ಲಿ ಸಿಲುಕಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕುಟುಂಬದ ಐವರು ಸದಸ್ಯರು ಸೇರಿದಂತೆ ಒಟ್ಟು 32 ಜನರಿದ್ದು, ಈ ಪೈಕಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಹಾಗೂ ಹಿರಿಯ ವೀರಶೈವ ಸಮಾಜದ ಮುಖಂಡ ಮೇಟಿ ಪಂಪನಗೌಡ ಕುಟುಂಬದವರೇ 15 ಜನರಿದ್ದಾರೆ. ಮೇಟಿ ಪಂಪನಗೌಡ, ಪತ್ನಿ ಸೇರಿದಂತೆ ಒಂದೇ ಕುಟುಂಬದ 15 ಜನರು ಇದೇ ಮೊದಲ ಬಾರಿಗೆ ದುಬೈ ವೀಕ್ಷಿಸಲು ತೆರಳಿದ್ದರು. ಎಲ್ಲವೂ ಸುಖಾಂತ್ಯವಾಗಿತ್ತು. ವಿದೇಶಿ ಅನುಭವ ಕುರಿತು ಬಳ್ಳಾರಿಯಲ್ಲಿದ್ದ ಕುಟುಂಬ ಸದಸ್ಯರಿಗೆ ತಿಳಿಸುತ್ತಿದ್ದರು. ಇನ್ನೆರಡು ದಿನದಲ್ಲಿ ಬಳ್ಳಾರಿಯಲ್ಲಿ ಇರುತ್ತೇವೆ ಎಂದು ದೂರವಾಣಿಯಲ್ಲಿ ಹೇಳಿದ್ದವರು ಇದೀಗ ದುಬೈನಲ್ಲಿ ಲಾಕ್ ಆಗಿದ್ದಾರೆ. ಇದು ಕುಟುಂಬ ಸದಸ್ಯರಿಗೆ ಆತಂಕ ತರಿಸಿದೆ. ದುಬೈ ಮೇಲೆ ಸಹ ಇರಾನ್ ದಾಳಿ ನಡೆಸುತ್ತಿರುವುದರಿಂದ ನಮಗೆ ಸಾಕಷ್ಟು ಆತಂಕವಿದೆ. ದುಬೈ ಸುರಕ್ಷಿತ ಎಂದುಕೊಂಡಿದ್ದೆವು. ಆದರೆ, ಮಾಧ್ಯಮಗಳಲ್ಲಿ ದಾಳಿ ನೋಡಿ ಕಂಗಾಲಾಗಿದ್ದೇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ನಮ್ಮ ಕುಟುಂಬ ಸದಸ್ಯರು ಸೇರಿದಂತೆ ದುಬೈನಲ್ಲಿರುವ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು ಎಂದು ಮೇಟಿ ಪಂಪನಗೌಡ ಅವರ ಪುತ್ರ ಮೇಟಿ ದಿವಾಕರ್ ಅವರು ಮನವಿ ಮಾಡಿದ್ದಾರೆ.

''''ಕನ್ನಡಪ್ರಭ'''' ಜತೆ ಮಾತನಾಡಿದ ಅವರು, ಇರಾನ್ ದಾಳಿಯಿಂದ ನಮಗೆ ದಿಗಿಲಾಗಿದೆ. ದುಬೈ ಕನ್ನಡಿಗರು, ಬಳ್ಳಾರಿ ನಗರ ಹಾಗೂ ಗ್ರಾಮೀಣ ಶಾಸಕರು ನಿರಂತರ ಕರೆ ಮಾಡಿ ಅವರ ಆರೋಗ್ಯ ಕ್ಷೇಮ ವಿಚಾರಿಸುತ್ತಿದ್ದಾರೆ. ಕುಟುಂಬ ಸದಸ್ಯರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಇಡೀ ಕುಟುಂಬ ಸದಸ್ಯರು ಆತಂಕದಲ್ಲಿದ್ದೇವೆ ಎಂದು ದಿವಾಕರ್ ತಿಳಿಸಿದರು.ಆತಂಕದಲ್ಲಿದ್ದೇವೆ: ನಮ್ಮ ಕುಟುಂಬ ಸದಸ್ಯರು ಸುರಕ್ಷಿತವಾದ ಸ್ಥಳದಲ್ಲಿದ್ದಾರೆ. ಆದರೆ, ಬಾಂಬ್‌ಗಳ ಸದ್ದು ಕೇಳಿಸುತ್ತಿರುವುದರಿಂದ ತೀವ್ರ ಆತಂಕದಲ್ಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಕುಟುಂಬ ಸೇರಿದಂತೆ ಭಾರತದ ಎಲ್ಲರನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ದುಬೈನಲ್ಲಿ ಸಿಲುಕಿರುವ ಮೇಟಿ ಪಂಪನಗೌಡ ಅವರ ಪುತ್ರ ಬಳ್ಳಾರಿಯ ಮೇಟಿ ದಿವಾಕರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಶ್ರಿಕೋಟಿ ಗ್ರಾಮದೇವಿಯರ ಜಾತ್ರೆಗೆ ಅದ್ಧೂರಿ ಚಾಲನೆ
ಕರ್ನಾಟಕ ವಿಶ್ವವಿದ್ಯಾಲಯ ಶೈಕ್ಷಣಿಕ ಶಿಸ್ತು ಪುನರ್‌ ಸ್ಥಾಪನೆಗೆ ಕಸರತ್ತು!