ಮಂಜುಗುಣಿ ರಥೋತ್ಸವ: ಸಿದ್ಧವಾಗುತ್ತಿದೆ 15 ಸಾವಿರ ಅತಿರಸ

KannadaprabhaNewsNetwork |  
Published : Mar 29, 2026, 02:00 AM IST
ಶಿರಸಿ ತಾಲೂಕಿನ ಮಂಜಗುಣಿ ದೇವಸ್ಥಾನದಲ್ಲಿ ಅತಿರಸ ಮತ್ತು ಲಡ್ಡು ಸಿದ್ಧಪಡಿಸಲಾಗುತ್ತಿದೆ. | Kannada Prabha

ಸಾರಾಂಶ

ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಏ. 2ರಂದು ನಡೆಯಲಿರುವ ಈ ಭವ್ಯ ರಥೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ವಿತರಿಸಲಾಗುವ ವಿಶೇಷ ಪ್ರಸಾದದ ಸಿದ್ಧತೆಗಳು ದೇವಸ್ಥಾನದ ಪ್ರಸಾದ ಗೃಹದಲ್ಲಿ ಅತ್ಯಂತ ಭರದಿಂದ ಸಾಗಿವೆ.

​ಶಿರಸಿ: ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಏ. 2ರಂದು ನಡೆಯಲಿರುವ ಈ ಭವ್ಯ ರಥೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ವಿತರಿಸಲಾಗುವ ವಿಶೇಷ ಪ್ರಸಾದದ ಸಿದ್ಧತೆಗಳು ದೇವಸ್ಥಾನದ ಪ್ರಸಾದ ಗೃಹದಲ್ಲಿ ಅತ್ಯಂತ ಭರದಿಂದ ಸಾಗಿವೆ.

​ಈ ಬಾರಿಯ ರಥೋತ್ಸವಕ್ಕಾಗಿ ಪ್ರಸಾದ ತಯಾರಿಯ ಕಾರ್ಯವು ಯುಗಾದಿ ಹಬ್ಬದ ಶುಭ ದಿನದಿಂದಲೇ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಕಳೆದ ಎಂಟು ದಿನಗಳಿಂದ ದೇವಸ್ಥಾನದ ಪ್ರಸಾದಾಲಯಯಲ್ಲಿ ನಿರಂತರವಾಗಿ ಪ್ರಸಾದ ತಯಾರಿಸುವ ಕಾರ್ಯ ನಡೆಯುತ್ತಿದೆ. ರಥೋತ್ಸವದ ದಿನ ಆಗಮಿಸುವ ಸಾವಿರಾರು ಭಕ್ತರಿಗೆ ವಿತರಿಸಲು ಸುಮಾರು 15 ಸಾವಿರ ಅತ್ರಾಸ (ಅತಿರಸ) ಹಾಗೂ 6 ಸಾವಿರ ಲಡ್ಡು ತಯಾರಿಸುವ ಗುರಿ ಹೊಂದಲಾಗಿದೆ.

​ದೇವಸ್ಥಾನದ ಸಂಪ್ರದಾಯದಂತೆ ಅತ್ಯಂತ ಶುದ್ಧವಾದ ಅಕ್ಕಿ, ಬೆಲ್ಲ, ಬೋಳಕಾಳು (ಕಾಳುಮೆಣಸು) ಮತ್ತು ಏಲಕ್ಕಿಯನ್ನು ಬಳಸಿ ಅತ್ರಾಸ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಈ ಅತ್ರಾಸವನ್ನು ತುಪ್ಪದಲ್ಲಿ ಕರಿಯುವುದು ವಿಶೇಷವಾಗಿದೆ.

ಪ್ರಸಾದದ ಗುಣಮಟ್ಟ ಮತ್ತು ಸಾಂಪ್ರದಾಯಿಕ ರುಚಿಯನ್ನು ಕಾಪಾಡಿಕೊಳ್ಳಲು ವಿಶೇಷ ಗಮನ ಹರಿಸಲಾಗಿದ್ದು, ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕ ಪದಾರ್ಥಗಳಿಂದಲೇ ಈ ಪ್ರಸಾದ ಸಿದ್ಧಪಡಿಸಲಾಗುತ್ತಿದೆ.

​ಪ್ರಸಾದ ತಯಾರಿಯ ಈ ಮಹತ್ಕಾರ್ಯದಲ್ಲಿ ಪ್ರಸಾದ ತಯಾರಿಕಾ ತಜ್ಞರು ಮತ್ತು ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮೂವರು ಪ್ರಸಾದ ತಯಾರಿಕಾ ಪರಿಣತರು ಅತ್ರಾಸ ತಯಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರೆ, ಕಳೆದ ಎಂಟು ದಿನಗಳಿಂದ ಇಬ್ಬರು ಲಡ್ಡು ತಯಾರಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಪೂರ್ಣ ಸಿದ್ಧತೆಯ ಉಸ್ತುವಾರಿಯನ್ನು ಪ್ರಮುಖರಾದ ಗಣಪತಿ ಭಟ್ ಸೂರನಜಡ್ಡಿ ವಹಿಸಿಕೊಂಡಿದ್ದಾರೆ. ಇವರಿಗೆ ಪೂರಕವಾಗಿ ಅನೇಕರು ಸಕ್ರಿಯವಾಗಿ ಕೈಜೋಡಿಸಿ ಪ್ರಸಾದ ವಿತರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಏ. 2ರಂದು ನಡೆಯುವ ರಥೋತ್ಸವಕ್ಕೆ ಜಿಲ್ಲೆಯಾದ್ಯಂತ ಹಾಗೂ ಹೊರಜಿಲ್ಲೆಗಳಿಂದಲೂ ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಬಂದ ಭಕ್ತರೆಲ್ಲರಿಗೂ ಶ್ರೀ ದೇವಸ್ಥಾನದ ಈ ವಿಶೇಷ ಪ್ರಸಾದ ಬೇಕಿದ್ದಲ್ಲಿ ತಲುಪುವಂತೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ವಯಂಸೇವಕರು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂಬುದು ವಿಶೇಷವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಫಾಯಿ ಕರ್ಮಚಾರಿಗಳ ಸೇವೆ ಅತ್ಯಮೂಲ್ಯ: ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ್‌
ಹೆಣ್ಣಿನ ಸಾಮರ್ಥ್ಯ ಅಡುಗೆ ಮನೆಯಿಂದ ಆಕಾಶದಗಲಕ್ಕೆ-ಡಾ. ದಾನಮ್ಮನವರ