ಸಂಘದಿಂದ 28 ಕುಂಟೆ ಜಾಗವನ್ನು ತೆಗೆದುಕೊಂಡಿದ್ದೇವೆ. ಅದೇ ರೀತಿ ನಿಮ್ಮ ಸಂಘವು ಸುಮಾರು 500ಕ್ಕೂ ಹೆಚ್ಚು ಸದಸ್ಯರ ಒಳಗೊಂಡಿದ್ದು ಒಗ್ಗಟ್ಟಿನಿಂದ ಸಹಕರಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಮಧ್ಯ ಮಾರಾಟಗಾರರಿಗೆ ಲೈಸನ್ ಫೀಸ್ ಕಟ್ಟುವುದಕ್ಕಾಗಲಿ ಅಥವಾ ಇನ್ಯಾವುದೇ ಅವಶ್ಯಕತೆ ಇದ್ದರೆ ಅವರಿಗೆ ಹಣ ನೀಡಿ ಆರ್ಥಿಕ ಸಮಸ್ಯೆ ಸುಧಾರಿಸಲು ನೆರವಾಗಬೇಕು.

ಹಲಗೂರು:

ಯಾವುದೇ ಸಂಘ-ಸಂಸ್ಥೆಗಳು ಅಭಿವೃದ್ಧಿ ಆಗಲು ಸದಸ್ಯರು, ನಿರ್ದೇಶಕರಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಸಾಧ್ಯ ಎಂದು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳಿ ಅಧ್ಯಕ್ಷರು, ನಿಯೋಜಿತ ಬೆಂಗಳೂರು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಮೈಸೂರಿನ ಚಂದ್ರಶೇಖರ್ ಹೇಳಿದರು.

ಚಿಲ್ಲಾಪುರ ಗ್ರಾಮದ ಸಿದ್ದಪ್ಪಾಜಿ ಸಮುದಾಯ ಭವನದಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಸರ್ವ ಸದಸ್ಯರ ಸಭೆ ಮತ್ತು ಕೋ ಆಪರೇಟಿವ್ ಸೊಸೈಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರಿನಲ್ಲಿ ಸಂಘವನ್ನು ಸ್ಥಾಪನೆ ಮಾಡಿಕೊಂಡು ಮದ್ಯ ಮಾರಾಟಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ಸಂಘವು ಅಭಿವೃದ್ಧಿ ಹೊಂದಿದೆ ಎಂದರು.

ಸಂಘದಿಂದ 28 ಕುಂಟೆ ಜಾಗವನ್ನು ತೆಗೆದುಕೊಂಡಿದ್ದೇವೆ. ಅದೇ ರೀತಿ ನಿಮ್ಮ ಸಂಘವು ಸುಮಾರು 500ಕ್ಕೂ ಹೆಚ್ಚು ಸದಸ್ಯರ ಒಳಗೊಂಡಿದ್ದು ಒಗ್ಗಟ್ಟಿನಿಂದ ಸಹಕರಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಮಧ್ಯ ಮಾರಾಟಗಾರರಿಗೆ ಲೈಸನ್ ಫೀಸ್ ಕಟ್ಟುವುದಕ್ಕಾಗಲಿ ಅಥವಾ ಇನ್ಯಾವುದೇ ಅವಶ್ಯಕತೆ ಇದ್ದರೆ ಅವರಿಗೆ ಹಣ ನೀಡಿ ಆರ್ಥಿಕ ಸಮಸ್ಯೆ ಸುಧಾರಿಸಲು ನೆರವಾಗಬೇಕು ಎಂದರು.

ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ಮದ್ಯ ಮಾರಾಟಗಾರರ ಸಂಘದ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಮಳವಳ್ಳಿ ತಾಲೂಕು ಮದ್ಯ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ಟಿ.ಗೋಪಾಲ್ ಮಾತನಾಡಿ, ಮದ್ಯದ ಅಂಗಡಿ ಪ್ರಾರಂಭಿಸಿ ಮಾರಾಟ ಮಾಡುವುದು ಇಂದು ತುಂಬಾ ಕಷ್ಟವಾಗಿದೆ. ಸಂಘ ಸ್ಥಾಪನೆಯಾಗಿದೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಮಂಡ್ಯ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಗೌರವಾಧ್ಯಕ್ಷ ಎಚ್.ಪಿ.ಮಹೇಶ್ ಮಾತನಾಡಿ, ಎರಡು ವರ್ಷದಿಂದ ಮಂಡ್ಯ ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರ ಸಂಘ ಪ್ರಾರಂಭಿಸಬೇಕು ಎಂದುಕೊಂಡೆವು. ಹಲವು ಅಡೆತಡೆಗಳಿಂದ ಇಂದು ಪ್ರಾರಂಭವಾಗಿದೆ. ಚಂದ್ರಣ್ಣರ ಮಾರ್ಗದರ್ಶನದಲ್ಲಿ ಸಂಘ ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಇದೇ ವೇಳೆ ಸಂಘದ ವತಿಯಿಂದ ಚಂದ್ರಶೇಖರ್, ವೇದಿಕೆಯಲ್ಲಿದ್ದ ಮದ್ದೂರು, ಮಳವಳ್ಳಿ ಮದ್ಯ ಮಾರಾಟಗಾರ ಹಿರಿಯರು ಹಾಗೂ ಸದಸ್ಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಗೋವಿಂದರಾಜು, ರಘು,ದಿನೇಶ್, ಮಧು, ಶಿವಕುಮಾರ್, ಪ್ರವೀಣ್ ಮತ್ತು ಸಂಘದ ಪದಾಧಿಕಾರಿಗಳಾದ ಮಳವಳ್ಳಿ ತಾಲೂಕು ಸಂಘದ ಅಧ್ಯಕ್ಷ ಜಯರಾಮ್, ಕಾರ್ಯದರ್ಶಿ ಎಚ್.ಎನ್.ಶ್ರೀಧರ್, ಖಜಾಂಜಿ ಎಚ್.ಆರ್.ರವಿ, ಉಪಾಧ್ಯಕ್ಷರಾದ ಬಿ.ಕೆ.ಕೀರ್ತಿ, ಪ್ರಜ್ವಲ್, ಕೃಷ್ಣಪ್ಪ, ಎಸ್.ಲತಾ, ಎಚ್.ಜಿ. ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.