ಕನ್ನಡಪ್ರಭ ವಾರ್ತೆ ಮಂಗಳೂರು ತುಳುನಾಡಿನ ನೆಲದ ಪರಂಪರೆಯ ಹುಲಿ ವೇಷಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ದೊರಕಿಸುವ ಮತ್ತು ಈ ಶ್ರೇಷ್ಠ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಉದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅ.21ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ‘ಕುಡ್ಲದ ಪಿಲಿ ಪರ್ಬ-2023’ ಆಯೋಜಿಸಿದೆ. ಈ ಕುರಿತು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮಾರ್ಗದರ್ಶಕ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಕುಡ್ಲದ ಲಿಪಿ ಪರ್ಬಗೆ ಚಾಲನೆ ಸಿಗಲಿದೆ. ಈ ಸಂದರ್ಭ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್, ಜಿಲ್ಲಾ ಎಸ್ಪಿ ರಿಷ್ಯಂತ್, ಸಿನಿಮಾ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ ಎಂದರು. ಕರಾವಳಿಯ ಜನಪ್ರಿಯ 15 ಹುಲಿ ವೇಷ ತಂಡಗಳು ಸ್ಪರ್ಧಾ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಯೊಂದು ಹುಲಿ ವೇಷ ವಿಭಿನ್ನತೆಯಿಂದ ಕೂಡಿರಲಿದೆ. ಹುಲಿ ವೇಷ ತಂಡಗಳು ಮೆರವಣಿಗೆ ಮೂಲಕ ವೇದಿಕೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿದೆ. ಪ್ರತಿ ತಂಡವೂ 38 ಕೇಜಿ ಭಾರದ ಅಕ್ಕಿ ಮುಡಿ ಹಾರಿಸುವುದು ಕಡ್ಡಾಯವಾಗಿದೆ. ಕರಿ ಹುಲಿಗಳು, ಮರಿ ಹುಲಿ, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟ ವೈವಿಧ್ಯತೆಯಿಂದ ಕೂಡಿರಲಿದೆ ಎಂದರು. ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಚೇತನ್ ಕಾಮತ್, ಕಿರಣ್ ಶೆಣೈ, ಸೂರಜ್ ಕಾಮತ್, ಜಗದೀಶ್ ಕದ್ರಿ, ಲಲಿತ್ ರಾಜ್ ಮೆಂಡನ್, ಉದಯ ಪೂಜಾರಿ, ಅಶ್ವಿತ್ ಕೊಟ್ಟಾರಿ ಇದ್ದರು. ಗೆದ್ದ ತಂಡಕ್ಕೆ 5 ಲಕ್ಷ ರು. ಬಹುಮಾನ! ಈ ಬಾರಿಯ ಎರಡನೇ ವರ್ಷದ ಕುಡ್ಲ ಪಿಲಿ ಪರ್ಬ-2023 ಹುಲಿ ವೇಷ ಸ್ಪರ್ಧೆಯಲ್ಲಿ 15 ತಂಡಗಳು ಪಾಲ್ಗೊಳ್ಳುತ್ತಿವೆ. ಗೆದ್ದ ತಂಡಕ್ಕೆ 5 ಲಕ್ಷ ರು., ದ್ವಿತೀಯ 3 ಲಕ್ಷ ರು. ಹಾಗೂ ತೃತೀಯ 2 ಲಕ್ಷ ರು. ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೆ ಭಾಗವಹಿಸಿದ ಇತರೆ 12 ತಂಡಗಳಿಗೆ ತಲಾ 50 ಸಾವಿರ ರು. ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.