ಕನಕಪುರ: ನಗರದ ಎಂ.ಜಿ.ರಸ್ತೆಯ ತಾಯಪ್ಪನ ಗಲ್ಲಿಯಲ್ಲಿ ಬಾಗಿಲು ಮುರಿದು 3 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ತಾಯಪ್ಪನ ಗಲ್ಲಿಯ ಸುನಿಲ್ ಮನೆಯಲ್ಲಿ ಅ.13ರಂದು ಸುನಿಲ್ ಅವರ ಸಹೋದರನ ಮಗುವಿಗೆ ಆರೋಗ್ಯ ಸಮಸ್ಯೆಯಿಂದ ಮನೆ ಬೇಗ ಹಾಕಿಕೊಂಡು ಗದಗಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಅ.16ರಂದು ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದರು. 17ರಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮನೆ ಬಳಿ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಸುನಿಲ್ ಮನೆಗೆ ಬಂದು ಬೀರುವಿನಲ್ಲಿದ್ದ ಒಂದು ಲಾಂಗ್ ಚೈನ್, ಒಂದು ಚಿಕ್ಕ ಚೈನು, 3 ಉಂಗುರ, ಒಂದು ಪ್ಲಾಟಿನಂ ಚೈನು, ಒಂದು ಜೊತೆ ಓಲೆ, 3 ಮೂಗುತಿ, ಒಂದು ಜೊತೆ ಮಗುವಿನ ಬಳೆ, ಒಂದು ಡೈಮಂಡ್ ರಿಂಗ್ ಸೇರಿ ಒಟ್ಟು 3 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.