ಮಂಗಳಾದೇವಿ ವ್ಯಾಪಾರ ದಂಗಲ್‌ ವಿರುದ್ಧ ಕ್ರಮ: ಗುಂಡೂರಾವ್‌

KannadaprabhaNewsNetwork | Updated : Oct 19 2023, 12:46 AM IST

ಸಾರಾಂಶ

ವ್ಯಾಪಾರ ದಂಗಲ್ಲ್‌ ವಿರುದ್ಧ ಕ್ರಮ- ಸಚಿವ ದಿನೇಶ್ಶ್‌ ಗುಂಡೂರಾವ್ವ್‌
ಕನ್ನಡಪ್ರಭ ವಾರ್ತೆ ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದು ವ್ಯಾಪಾರಸ್ಥರ ಮಳಿಗೆಗಳಿಗೆ ಕೇಸರಿ ಬಾವುಟ ಕಟ್ಟಿ, ಮುಸ್ಲಿಂ ವ್ಯಾಪಾರಿಗಳ ಮಳಿಗೆಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು ಎಂದು ಕರೆ ನೀಡಿರುವ ವಿವಾದ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಂಗಳಕ್ಕೆ ಹೋಗಿದ್ದು, ಈ ಬಗ್ಗೆ ತಕ್ಷಣ ಪೊಲೀಸ್‌ ಆಯುಕ್ತರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಸಚಿವರನ್ನು ಭೇಟಿಯಾದ ಜಾತ್ರಾ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ ನಿಯೋಗವು, ವ್ಯಾಪಾರ ಬಹಿಷ್ಕಾರದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದಕ್ಕೆ ಕಾರಣರಾದ ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್, ಇಂಥಹ ಕೆಲಸವನ್ನು ಯಾರೂ ಮಾಡಬಾರದು. ಸಂವಿಧಾನದ ಪ್ರಕಾರ ದೇಶ ನಡೆಯಬೇಕೇ ಹೊರತು ಧರ್ಮದ ಪ್ರಕಾರ ಅಲ್ಲ. ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಮಾಡಲಿ, ಕಾನೂನು ಬಿಟ್ಟು ಏನನ್ನೂ ಮಾಡಬಾರದು. ಅವರು ಕೊಟ್ಟ ಕರೆಯನ್ನು ಯಾರೂ ಒಪ್ಪಿಕೊಳ್ಳಬೇಕಿಲ್ಲ. ಆ ಕರೆಗಳಿಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಇಂಥ ಧಾರ್ಮಿಕ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳನ್ನು ಕರೆದು ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ನಿಯೋಗದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ರಘು ಕೆ. ಎಕ್ಕಾರು, ಸಾಮಾಜಿಕ ಕಾಂಗ್ರೆಸ್‌ ಮುಖಂಡ ಎಂ.ಜಿ. ಹೆಗಡೆ, ಯಾಸೀನ್ ಕುದ್ರೋಳಿ, ದ.ಕ, ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತಿತರರು ಇದ್ದರು.

Share this article