ಪ್ರತೀ 7 ನಿಮಿಷಕ್ಕೆ 150 ರು ವಿಧಿಸುವ ಏರ್‌ಪೋರ್ಟ್‌ ಶುಲ್ಕ ವಾಪಸ್‌

KannadaprabhaNewsNetwork | Published : May 22, 2024 1:23 AM

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಿಕ್‌ಅಪ್‌ ಲೇನ್‌ ಪ್ರವೇಶಿಸುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಆದೇಶ ಜಾರಿಪಡಿಸಿತ್ತು, ಚಾಲಕರು ಮತ್ತು ಮಾಲೀಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಂಗಳವಾರ ಶುಲ್ಕ ವಸೂಲಾತಿ ಹಿಂಪಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಪಿಕ್‌ಅಪ್‌ ಲೇನ್‌ ಪ್ರವೇಶಿಸುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಆದೇಶಕ್ಕೆ ಚಾಲಕರು ಮತ್ತು ಮಾಲೀಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಮಂಗಳವಾರ ಶುಲ್ಕ ವಸೂಲಾತಿಯನ್ನು ತಡೆ ಹಿಡಿಯಲಾಗಿತ್ತು.

ಕೆಐಎನಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸಲು ಹೋಗುವ ವಾಣಿಜ್ಯ ವಾಹನಗಳು ಪಿಕ್‌ಅಪ್‌ ಲೇನ್ ಪ್ರವೇಶಿಸಬೇಕೆಂದರೆ 7 ನಿಮಿಷಕ್ಕೆ ₹150 ಶುಲ್ಕ ಪಾವತಿಸಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್) ಸೋಮವಾರ ಆದೇಶಿಸಿತ್ತು. ಆ ಕುರಿತು ಕೆಐಎನಲ್ಲಿ ಫಲಕವನ್ನೂ ಹಾಕಲಾಗಿತ್ತು. ಈ ಬಗ್ಗೆ ಚಾಲಕ ಸಂಘಟನೆಗಳು ಹಾಗೂ ವಾಹನ ಚಾಲಕರು, ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕರ್ನಾಟಕ ಚಾಲಕರ ಒಕ್ಕೂಟ ಸೇರಿದಂತೆ ಇನ್ನಿತರ ಸಂಘಟನೆಗಳು ಬಿಐಎಎಲ್‌ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ತಿಳಿಸಿದ್ದವು.

ಜತೆಗೆ ಕೆಐಎಗೆ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದವರೆಗೆ ಕರೆತರದೇ ಟೋಲ್‌ ಗೇಟ್‌ ಅಥವಾ ವಿಮಾನ ನಿಲ್ದಾಣದ ಹೊರಭಾಗದಲ್ಲಿಯೇ ಇಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದವು. ಆ ಹಿನ್ನೆಲೆಯಲ್ಲಿ ಮಂಗಳವಾರ ಕೆಐಎನಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಂದ ಪಿಕ್‌ಅಪ್‌ ಲೇನ್‌ ಪ್ರವೇಶಕ್ಕೆ ಯಾವುದೇ ಶುಲ್ಕವನ್ನೂ ಪಡೆದಿಲ್ಲ. ಅಲ್ಲದೆ, ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪಿಕ್‌ಅಪ್‌ ಲೇನ್‌ ಬಳಿ ಹಾಕಲಾಗಿದ್ದ ಫಲಕವನ್ನೂ ಮುಚ್ಚಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚಿನ ವಾಹನಗಳು ತೆರಳುತ್ತವೆ. ಆ ವಾಹನಗಳಿಂದ ಶುಲ್ಕ ಪಡೆಯುವುದು ಸಮಂಜಸವಲ್ಲ. ಸದ್ಯ ಪಿಕ್‌ಅಪ್‌ ಲೇನ್‌ ಶುಲ್ಕವನ್ನು ಪಡೆಯದಿರಲು ಕೆಐಎ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತೆ ಶುಲ್ಕ ಪಡೆಯುವ ಕುರಿತು ಯಾವುದೇ ಆದೇಶ ಮಾಡಬಾರದು. ಒಂದು ವೇಳೆ ಮಾಡಿದರೆ ಬಿಐಎಎಲ್‌ ವಿರುದ್ಧ ಹೋರಾಟ ಮಾಡಲಾಗುತ್ತದೆ.

-ನಟರಾಜ್‌ ಶರ್ಮಾ, ಅಧ್ಯಕ್ಷ, ಸಾರಿಗೆ ಒಕ್ಕೂಟ

Share this article