ಕಬ್ಬು ಸರಬರಾಜು ಮಾಡಿದ ರೈತರಿಗೆ 150 ರು. ನೀಡುವಂತೆ ಆಗ್ರಹ

KannadaprabhaNewsNetwork |  
Published : Apr 08, 2026, 01:45 AM IST
7ಕೆಎಂಎನ್ ಡಿ14 | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ರೈತರಿಗೆ ಕೊಡಬೇಕಿರುವ ಕಬ್ಬಿನ ಬಾಕಿ ಹಣ 150 ರು. ತಕ್ಷಣವೇ ನೀಡುವಂತೆ ಹೇಳಿದ್ದರೂ ಇನ್ನೂ ಕೊಡಲಿಲ್ಲ. ಜಿಲ್ಲಾಡಳಿತದ ರೈತವಿರೋಧಿ ನೀತಿ ಮತ್ತು ತಾರತಮ್ಯ ಖಂಡನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬು ಸರಬರಾಜು ಮಾಡಿದ ರೈತರಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕೊಡಬೇಕಿರುವ ಕಬ್ಬಿನ ಬಾಕಿ ಹಣ 150 ರು. ತಕ್ಷಣ ನೀಡುವಂತೆ ಆಗ್ರಹಿಸಿ ನಗರದಲ್ಲಿ ರೈತರು, ರೈತಸಂಘದ ಕಾರ್ಯಕರ್ತರು ದಿಢೀರ್ ಹೆದ್ದಾರಿ ತಡೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಕೆಂಪೂಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ನಂತರ ರೈತಪರ ವಿಚಾರ ಮತ್ತು ಸಂಘಟನೆ-ಹೋರಾಟ ಕುರಿತು ಚರ್ಚಿಸಿ, ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಸರ್ಕಾರ ಮತ್ತು ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಘೋಷಣೆ, ಹೆದ್ದಾರಿ ತಡೆ ನಡೆಸಿ ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ರೈತರಿಗೆ ಕೊಡಬೇಕಿರುವ ಕಬ್ಬಿನ ಬಾಕಿ ಹಣ 150 ರು. ತಕ್ಷಣವೇ ನೀಡುವಂತೆ ಹೇಳಿದ್ದರೂ ಇನ್ನೂ ಕೊಡಲಿಲ್ಲ. ಜಿಲ್ಲಾಡಳಿತದ ರೈತವಿರೋಧಿ ನೀತಿ ಮತ್ತು ತಾರತಮ್ಯವನ್ನು ಖಂಡಿಸಿದರು.

ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಸಾಕುಪ್ರಾಣಿಗಳು ಮತ್ತು ಮನುಷ್ಯರು ಬಲಿಯಾಗಿ ಜೀವಭಯದಿಂದ ಬದುಕುತ್ತಿದ್ದಾರೆ. ಅರಣ್ಯ ಇಲಾಖೆಗೆ ಹೇಳಿದರೆ ನೂರಾರು ಚಿರತೆಗಳಿವೆ ನಾವೇನು ಮಾಡೋಣ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿಭಾಷೆ ಏರಿಕೆ ಬೇಡ, ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಹಿಂದಿ ಕಲಿಯೋರು ಕಲಿಯಬಹುದು. ಅದನ್ನು ಕಡ್ಡಾಯಗೊಳಿಸುವುದನ್ನು ನಾವು ಒಪ್ಪುವುದಿಲ್ಲ ಎಂದು ಕಿಡಿಕಾರಿದರು.

ಏ.18ರಂದು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ರೈತಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಕನ್ನಡಪರ, ದಲಿತ ಸಂಘಟನೆಗಳ ನೆರವಿನೊಂದಿಗೆ ಕಬ್ಬು ಬಾಕಿ ಹಣ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳಾದ ಲಿಂಗಪ್ಪಾಜಿ, ರವಿಕುಮಾರ್, ಲತಾ ಶಂಕರ್, ಮಮತರಾ, ರಂಜಿತಾ, ರಾಣಿಯಮ್ಮ, ಜಿ.ಎ.ಶಂಕರ್, ಕೆ.ಟಿ.ಗೋವಿಂದೇಗೌಡ, ಜಯರಾಂ, ಮಂಜು, ರಘು, ವಿನೋದ್‌ಬಾಬು, ಶಂಭೂಗೌಡ, ಪಾಂಡು, ವಿಜಿ, ಅಣ್ಣಯ್ಯ, ಸಂತೋಷ್, ಸತೀಶ್, ನಾಗರಾಜು, ಸಿದ್ದೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ.15 ರಂದು ಆದಿಚುಂಚನಗಿರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಮದ್ದೂರು ಪ್ರತಿಭಟನಾ ಧರಣಿ ರಾಜಕೀಯ ಪ್ರೇರಿತ: ಶಾಸಕ ಕೆ.ಎಂ.ಉದಯ್