ಆಲಮಟ್ಟಿಯಿಂದ 15000 ಕ್ಯು ನೀರು ಹೊರಕ್ಕೆ

KannadaprabhaNewsNetwork | Published : Jul 15, 2024 1:49 AM

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವನ್ನು 15000 ಕ್ಯುಸೆಕ್ಸ್‌ಗೆ ಹೆಚ್ಚಿಸಲಾಗಿದೆ. ಭಾನುವಾರ ರಾತ್ರಿ 7 ಗಂಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಕೃಷ್ಣಾ ನದಿ ಹಿನ್ನೀರಿನಲ್ಲಿ ಯಾವುದೇ ಪ್ರವಾಹ ಸ್ಥಿತಿ ಉಂಟಾಗಬಾರದು ಎಂದು ಹೊರಹರಿವನ್ನು ಹೆಚ್ಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ:ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿ ಜಲಾಶಯದ ಹೊರಹರಿವನ್ನು 15000 ಕ್ಯುಸೆಕ್ಸ್‌ಗೆ ಹೆಚ್ಚಿಸಲಾಗಿದೆ. ಭಾನುವಾರ ರಾತ್ರಿ 7 ಗಂಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಕೃಷ್ಣಾ ನದಿ ಹಿನ್ನೀರಿನಲ್ಲಿ ಯಾವುದೇ ಪ್ರವಾಹ ಸ್ಥಿತಿ ಉಂಟಾಗಬಾರದು ಎಂದು ಹೊರಹರಿವನ್ನು ಹೆಚ್ಚಿಸಲಾಗಿದೆ. ಪ್ರವಾಹ ಉಂಟಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಅಧಿಕಾರಿಗಳು, ಕೆಬಿಜೆಎನ್ಎಲ್ ಅಧಿಕಾರಿಗಳು ಮೇಲಿಂದ ಮೇಲೆ ನೀರಿನ ಮಾಹಿತಿ ಮಳೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.ಜಲಾಶಯದ ಮಟ್ಟ:

519.60 ಮೀ ಎತ್ತರದ ಜಲಾಶಯದಲ್ಲಿ ಭಾನುವಾರ ಬೆಳಿಗ್ಗೆ 517.46 ಮೀ ಇದ್ದು, 23,678 ಕ್ಯುಸೆಕ್ ಒಳಹರಿವಿದೆ. ಜಲಾಶಯದಲ್ಲಿ 91 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ, ಆಲಮಟ್ಟಿಯ ಹೊರಹರಿವು ಹೆಚ್ಚಿಸಿದ್ದರಿಂದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ 55 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಎರಡು ಘಟಕಗಳು ಕಾರ್ಯಾರಂಭ ಮಾಡಿದ್ದು, ಅದರಿಂದ 100 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ನಾಳೆ ಐಸಿಸಿ ಸಭೆ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಯೋಜನೆಗಳ ಕಾಲುವೆಗಳ ಜಾಲಗಳಿಗೆ ನೀರು ಹರಿಸುವ ಮಹತ್ವದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ(ಐಸಿಸಿ) ಜು.16 ರಂದು ಸಂಜೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯಲಿದೆ. ಐಸಿಸಿಯ ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ ಐಸಿಸಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಭೀಮರಾಯನಗುಡಿ ಕಾಲುವೆ ವಲಯದ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.ಈ ಮೊದಲು ಜು.18 ರಂದು ಈ ಸಭೆ ಕರೆಯಲಾಗಿತ್ತು. ಆದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಹಿತ ಕಾಪಾಡುವ ಉದ್ದೇಶದಿಂದ, ಕಾಲುವೆಗೆ ತಕ್ಷಣ ನೀರು ಹರಿಸುವ ಉದ್ದೇಶದಿಂದ ಜು.16 ಕ್ಕೆ ಸಭೆ ನಡೆಸಲು ನಿರ್ಧರಿಸಲಾಗಿದೆ.

Share this article