ಹಗರಣ ಮಾಡಿದವರೇ, ಈಗ ಹಗರಣ ಎನ್ನುತ್ತಿದ್ದಾರೆ

KannadaprabhaNewsNetwork | Updated : Jul 15 2024, 01:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಎಂ ಸಿದ್ಧರಾಮಯ್ಯನವರ ಪತ್ನಿಗೆ ನಿವೇಶನ ಹಂಚಿಕೆ ಆಗಿದ್ದು, ಮುಡಾ ಹಾಗೂ ಅವರ ವ್ಯವಹಾರವಿದೆ. ಭೂ ಸ್ವಾಧೀನ ಮಾಡಿಕೊಂಡ ಮುಡಾ ಭೂಮಿಯ ಪರಿಹಾರದ ಬದಲಾಗಿ ನಿವೇಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಎಂ ಸಿದ್ಧರಾಮಯ್ಯನವರ ಪತ್ನಿಗೆ ನಿವೇಶನ ಹಂಚಿಕೆ ಆಗಿದ್ದು, ಮುಡಾ ಹಾಗೂ ಅವರ ವ್ಯವಹಾರವಿದೆ. ಭೂ ಸ್ವಾಧೀನ ಮಾಡಿಕೊಂಡ ಮುಡಾ ಭೂಮಿಯ ಪರಿಹಾರದ ಬದಲಾಗಿ ನಿವೇಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿಮಾಹಿತಿ ಹಂಚಿಕೊಂಡ ಅವರು, ಮುಡಾದಿಂದ 2021ರಲ್ಲಿ ನಿವೇಶನ ಹಂಚಿಕೆ ಮಾಡಿದ್ದ ಸಮಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಮುಡಾ ಕಮಿಟಿಯೂ ಬಿಜೆಪಿಯದ್ದೇ ಇತ್ತು, ಹಾಗಾಗಿ ಇದರಲ್ಲಿ ಸಿದ್ಧರಾಮಯ್ಯನವರದ್ದು ಯಾವುದೇ ವಾಮಮಾರ್ಗವಿಲ್ಲ, ಇದರಲ್ಲಿ ಹಗರಣವೂ ಆಗಿಲ್ಲ. ಅವರು ಯಾವುದೇ ಕಾನೂನು ಬಾಹಿರ ಕೆಲಸ ಮಾಡದೆ ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಹಗರಣ ಮಾಡಿದವರೇ, ಇದೀಗ ಹಗರಣ ಆಗಿದೆ ಎಂದು ಕೂಗಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಖಂಡಿಸುವುದಾಗಿ ಹೇಳಿದರು.

ಲೂಟಿ ಹೊಡೆದಿದ್ದು ಬಿಜೆಪಿ:ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಇದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಈ ಹಿಂದೆ ಬಿಜೆಪಿಯ ಆಡಳಿತದಲ್ಲೇ ಕೋವಿಡ್ ಸಮಯದಲ್ಲಿ ₹ 40ಸಾವಿರ ಕೋಟಿ ಹಗರಣ ಆಗಿದೆ ಎಂದು ಆರೋಪಿಸಿದ್ದರು. ಅದರ ಬಗ್ಗೆ ಬಿಜೆಪಿಯವರು ಯಾಕೆ ಮಾತಾಡುತ್ತಿಲ್ಲ?. ಶಾಸಕ ಮಾಡಾಳ ವಿರುಪಾಕ್ಷಪ್ಪನ ಮನೆಯಲ್ಲಿ ₹ 8 ಕೋಟಿ ಹಣ ಸಿಕ್ಕಿದ್ದರ ಬಗ್ಗೆ ಯಾಕೆ ಮಾತಾಡಲ್ಲ. ನೀಟ್ ಹಗರಣದಲ್ಲಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದರಲ್ಲಿ ಬಿಜೆಪಿಯವರೇ ಸಿಕ್ಕಿಹಾಕಿಕೊಂಡಿದ್ದಾರೆ, ಇದರ ಬಗ್ಗೆ ಮಾತನಾಡಿ. ಸಂತೋಷ ಎಂಬ ಗುತ್ತಿಗೆದಾರ ನೇರವಾಗಿ ಕೆ.ಎಸ್.ಈಶ್ವರಪ್ಪ ಮೇಲೆ ಆರೋಪಿಸಿ, ಜೀವ ಕಳೆದುಕೊಂಡರು, ಬಿಜೆಪಿಯವರು ಹಗರಣವನ್ನೇ ಮುಚ್ಚಿ ಹಾಕಿದರು ಎಂದು ಆರೋಪಿಸಿದರು.ಗ್ಯಾರಂಟಿ ವಿಚಾರ ಯತ್ನಾಳ ವಿರುದ್ದ ಕಿಡಿ:

ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಗ್ಯಾರಂಟಿ ಯೋಜನೆ ತಡೆಯಿರಿ ಎಂದು ದೆಹಲಿಗೆ ಹೋಗಿ ನಿರ್ಮಲಾ ಸಿತಾರಾಮನ್ ಅವರಿಗೆ ಮನವಿ ಕೊಡುತ್ತಾರೆ. ಈ ಮೂಲಕ ಯತ್ನಾಳ ಅವರು ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ, ಇವರು ಬಡವರ, ಅಹಿಂದ ವರ್ಗದ ವಿರುದ್ಧ ಇದ್ದಾರೆ. ಇದನ್ನು ತಡೆಯಿರಿ ಎಂದು ಯತ್ನಾಳರು ಬಡ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.ಕೆಪಿಸಿಸಿ ವೈದ್ಯಕೀಯ ಪ್ರಕೋಷ್ಠದ ಪ್ರಧಾನ ಕಾರ್ಯದರ್ಶಿ ಡಾ.ರವಿ ಬಿರಾದಾರ ಮಾತನಾಡಿ, ಬಿಜೆಪಿ ಎಂದರೇನೆ ಭ್ರಷ್ಟಾಚಾರ. ಎಲೆಕ್ಟ್ರಾಲ್ ಬಾಂಡ್ ಹಗರಣ ವಿಶ್ವದಲ್ಲೇ ಅತಿ ದೊಡ್ಡ ಹಗರಣ ಎಂದು ವಿತ್ತ ಸಿಚಿವೆ ನಿರ್ಮಲಾ‌ ಸಿತಾರಾಮನ ಅವರ ಪತಿಯೇ ಹೇಳಿದ್ದಾರೆ. ಸಿದ್ಧರಾಮಯ್ಯನವರು ಬಡತನ ಕುಟುಂಬದಿಂದ ಬಂದವರು. ಸ್ವಂತ ಶಕ್ತಿಯಿಂದ ಮೇಲೆ ಬಂದವರು ಸಿದ್ಧರಾಮಯ್ಯ‌. ಯಾವುದೇ ಕಳಂಕವಿಲ್ಲದೆ 2ನೇ ಬಾರಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ, ಆರ್‌ಎಎಸ್‌ಎಸ್ ನವರು ಮುಡಾದಲ್ಲಿ ಸಿಎಂ ಕುಟುಂಬದ ಹಗರಣ ಆಗಿದೆ ಎಂದು ಸುಳ್ಳು ಆರೋಪ ಹೊರೆಸುತ್ತಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ದೇಶದ ತುಂಬೆಲ್ಲ ಗಬ್ಬೆದ್ದು ನಾರುತ್ತಿದೆ. ತಮ್ಮ ಹಗರಣಗಳನ್ನು ಮುಚ್ಚಲು ಈ ರೀತಿ ಸಿಎಂ ಸಿದ್ಧರಾಮಯ್ಯನವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಫಯಾಜ್ ಕಲಾದಗಿ ಉಪಸ್ಥಿತರಿದ್ದರು.-------------------------------------------------ಕೋಟ್‌

ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಇದ್ದಾಗ ಬೆಂಗಳೂರಿನ ಸುತ್ತಮುತ್ತಲಿನ ಜಮೀನುಗಳನ್ನು ಸಂಘ ಪರಿವಾರದವರಿಗೆ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಬಹಳಷ್ಟು ಭೂಮಿ ಕಬಳಿಸಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ಹಗರಣವಾಗಿದೆ ಎಂದು ಶಾಸಕ ಯತ್ನಾಳರೇ ಹೇಳಿದ್ದಾರೆ.ಎಸ್.ಎಂ.ಪಾಟೀಲ್ ಗಣಿಹಾರ, ಕೆಪಿಸಿಸಿ ವಕ್ತಾರ

------------------------------

ಬಾಕ್ಸ್:ಪೇಜಾವರ ಶ್ರೀಗಳಿಗೆ ಕೈ ಮುಖಂಡ ತಿರುಗೇಟು

ರಾಮಮಂದಿರ ನಿರ್ಮಾಣ ಅಪೂರ್ಣವಾಗಿದ್ದರಿಂದ ಸೋರುತ್ತಿದೆ. ಆ ಕ್ಷೇತ್ರದಲ್ಲಿ ಬಡತನ ಇದ್ದುದರಿಂದ ಕಾಂಗ್ರೆಸ್ ಯಾಮಾರಿಸಿ ಗೆದ್ದಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ಅವರು, ಶ್ರೀಗಳು ಬಿಜೆಪಿ ವಕ್ತಾರರ ಥರ ಮಾತನಾಡುತ್ತಿದ್ದಾರೆ. ಅವರು ಬಿಜೆಪಿ ವಕ್ತಾರರಾಗೋದು ಒಳ್ಳೆಯದು. ಇಲ್ಲಾ ಕಾವಿ ಧರಿಸಿದ ಮೇಲೆ ಅದರ ಪಾವಿತ್ರ್ಯತೆ ಕಾಪಾಡಬೇಕು. ಪೇಜಾವರ ಮಠದ ಹಿಂದಿನ ಶ್ರೀಗಳು ಬಾಬರಿ ಮಸೀದಿ ಕೆಡವಲು ಪಣ ತೊಟ್ಟಿದ್ದರು, ಈಗಿನ ಶ್ರೀಗಳು ಬಿಜೆಪಿ ಪರ ಮಾತನಾಡುತ್ತಿದ್ದಾರೆ. ಕಾಮಗಾರಿ ಅಪೂರ್ಣ ಆಗಿದ್ದರೆ ಯಾಕೆ ಉದ್ಘಾಟನೆ ಮಾಡಬೇಕು? ಕಂಚಿ ಶ್ರೀಗಳು ಹೇಳಿದಂತೆ ಇವರೂ ಸಹ ಅಪೂರ್ಣ ಕಾಮಗಾರಿ ಆದ ಮಂದಿರ ಅವಸರಕ್ಕೆ ಬಿದ್ದು ಉದ್ಘಾಟನೆ ಮಾಡಬೇಡಿ ಎಂದು ಮೋದಿ ಅವರಿಗೆ ಹೇಳಬೇಕಿತ್ತು ಎಂದು ಗಣಿಹಾರ ಪ್ರಶ್ನಿಸಿದರು.ರಾಷ್ಟ್ರದ ಎಲ್ಲ ಸ್ವಾಮೀಜಿಗಳನ್ನು ಸುಮ್ಮನಿರಿಸಿ ಮೋದಿ ಪೂಜೆ ಮಾಡುತ್ತಿದ್ದರು. ಇವರೆಲ್ಲ ಸುಮ್ಮನೆ ಕುಳಿತಿದ್ದು, ರಾಷ್ಟ್ರಕ್ಕೆ ನಾಚಿಕೆಗೇಡಿನ ಸಂಗತಿ. ಇದು ಕೇವಲ ಚುನಾವಣೆ ಗಿಮಿಕ್‌ಗೆ ಎಂದು ಜನರಿಗೆ ಬಿಜೆಪಿಯ ಬಣ್ಣ ಗೊತ್ತಾಗಿದ್ದರಿಂದ ಅಯೋಧ್ಯೆ ಮಾತ್ರವಲ್ಲ, ಭದ್ರಿನಾಥನಲ್ಲೂ ಇವರು ಸೋತಿದ್ದಾರೆ. ಇನ್ನು ಕಾಂಗ್ರೆಸ್ ಆ ಕ್ಷೇತ್ರದಲ್ಲಿ ಗೆದ್ದಿದ್ದಕ್ಕೆ ಬಣ್ಣ ಬಳಿಯುವ ಇವರು, ಹತ್ತು ವರ್ಷ ಬಿಜೆಪಿಯದ್ದೇ ಆಡಳಿತವಿತ್ತಲ್ಲ, ಆಗ ಅಲ್ಲಿನ ಬಡತನ ಯಾಕೆ ಹೋಗಲಾಡಿಸಲಿಲ್ಲ. ಎಲೆಕ್ಷನ್ ವ್ಯವಸ್ಥೆ ಚುನಾವಣಾ ಆಯೋಗದ ಕೈಯಲ್ಲಿ ಇತ್ತು, ಕಾಂಗ್ರೆಸ್ ಅಲ್ಲಿ ಹೇಗೆ ಮೋಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು?.

Share this article