ಜಿಲ್ಲೆಯಲ್ಲಿ ಅಕ್ರಮ ಭೂ ಮಾರಾಟ ಅವ್ಯಾಹತ

KannadaprabhaNewsNetwork | Published : Jul 15, 2024 1:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರಿಗೆ ಭೂಮಿ ಮಾರಾಟ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಆದರೆ, ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿಯೇ ಇವು ಬೆಳಕಿಗೆ ಬರುತ್ತಿರುವುದರಿಂದ ಹಲವಾರು ಅಕ್ರಮಗಳಿಗೆ ಕಡಿವಾಣ ಕೂಡ ಬಿದ್ದಿದೆ. ಅಮಾಯಕರು, ಅಸಹಾಯಕರು, ಅನಕ್ಷರಸ್ಥರು, ಬಡವರ ಆಸ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಆಸ್ತಿ ಮಾರಾಟ ಮಾಡಲು ತಂಡವೇ ಸಿದ್ಧವಾಗಿರುತ್ತದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರಿಗೆ ಭೂಮಿ ಮಾರಾಟ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಆದರೆ, ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿಯೇ ಇವು ಬೆಳಕಿಗೆ ಬರುತ್ತಿರುವುದರಿಂದ ಹಲವಾರು ಅಕ್ರಮಗಳಿಗೆ ಕಡಿವಾಣ ಕೂಡ ಬಿದ್ದಿದೆ. ಅಮಾಯಕರು, ಅಸಹಾಯಕರು, ಅನಕ್ಷರಸ್ಥರು, ಬಡವರ ಆಸ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಆಸ್ತಿ ಮಾರಾಟ ಮಾಡಲು ತಂಡವೇ ಸಿದ್ಧವಾಗಿರುತ್ತದೆ.

ಜತೆಗೆ ಆ ತಂಡ ಖರೀದಿದಾರರನ್ನು ಕೂಡ ಅಣಿಗೊಳಿಸಿರುತ್ತದೆ. ಇದರಂತೆ ಖೊಟ್ಟಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಭೂಮಿ ಮಾರಾಟ ಮಾಡಿ ವಂಚಿಸಲಾಗಿದೆ. ಜತೆಗೆ ಯತ್ನ ಕೂಡ ನಡೆದಿದೆ. ಸುಮಾರು 10ಕ್ಕೂ ಅಧಿಕ ಬೇರೆ ಬೇರೆ ತಂಡಗಳಿಂದ ಕೋಟ್ಯಂತರ ಮೌಲ್ಯದ 20ಕ್ಕೂ ಅಧಿಕ ಆಸ್ತಿಗಳನ್ನು ಮಾರಾಟ ಮಾಡಿರುವುದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದೇ ಸಾಕ್ಷಿಯಾಗಿದೆ.

ಯಾರದ್ದೋ ಜಮೀನು, ಇನ್ಯಾರಿಗೋ ಮಾರಾಟ:

ಬಬಲೇಶ್ವರ ತಾಲೂಕಿನ ಧನ್ಯಾಳ ಗ್ರಾಮದ ಸರ್ವೇ ನಂ.26.2ರ 10 ಎಕರೆ 31ಗುಂಟೆ ಆಸ್ತಿ ವಿಜಯಾ ಪಾಟೀಲ್ ಹಾಗೂ ಪಾರ್ವತಿ ಹಣಮಶೆಟ್ಟಿ ಮಾಲೀಕರು. ಆದರೆ, ಈ ಆಸ್ತಿಯ ಮಾಲೀಕರು ನಾವೇ ಎಂದು ಅದೇ ಗ್ರಾಮದ ಆರೋಪಿ ಪ್ರವೀಣ ಅಲಿಯಾಸ ಪವನ ಅಣ್ಣಾಸಾಹೇಬ ಬಿರಾದಾರ ಎಂಬಾತ ತಾಲೂಕಿನ ಕಣಮುಚನಾಳ ಗ್ರಾಮದ ರಾಚಪ್ಪ ಗುಣಕಿ ಎಂಬುವವರಿಗೆ ಮಾರಲು ಯತ್ನಿಸಿದ್ದಾನೆ. ಅದರಂತೆ ಆಸ್ತಿ ಖರೀದಿಗೆಂದು ರಾಚಪ್ಪ ಹಾಗೂ ಪ್ರವೀಣ ಜು.12ರಂದು ದಸ್ತು ಬರಗಾರ ರಾಯಗೊಂಡ ಪೂಜಾರಿಗೆ ದಾಖಲೆಗಳನ್ನು ನೀಡಿದ್ದಾರೆ.

ಆಗ ಈ ಆಸ್ತಿಗಳ ದಾಖಲೆಗಳು ಖೊಟ್ಟಿ ಸೃಷ್ಟಿಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ಈ ಆಸ್ತಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ ಬಿರಾದಾರ, ವಿಶ್ವನಾಥ ಬಿರಾದಾರ, ವೆಂಕಟೇಶ ಪವಾರ, ಸೊಲಾಪುರದ ಅಸ್ಲಂ ಖಲಿ ನದಾಫ್ ಬಂಧಿತರಾಗಿದ್ದಾರೆ. ಇದರಂತೆಯೇ ಹತ್ತು ಹಲವಾರು ಪ್ರಕರಣಗಳು ಜಿಲ್ಲೆಯ ನಾನಾ ಭಾಗಗಳಲ್ಲಿ ನಡೆದಿದ್ದು, ಸಂಬಂಧಿಸಿದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ತಿಕೋಟಾ ತಾಲೂಕಿನ ಬರಟಗಿ ಗ್ರಾಮದ ರೇವಣಸಿದ್ದಪ್ಪ ಕೋರಿ ಎಂಬುವವರ 7ಎಕರೆ 35ಗುಂಟೆ ಭೂಮಿಯ ಖೊಟ್ಟಿ ದಾಖಲೆ ಸೃಷ್ಟಿಸಿ, ₹88 ಲಕ್ಷಕ್ಕೆ ಅರುಣ ಮಾಚಪ್ಪನವರ ಎಂಬುವವರಿಗೆ ಮಾರಿ ವಂಚಿಸಲಾಗಿದೆ. ಇದೆ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೇ ನಂ.48 ಬಾರ್‌ 1ರ 20ಎಕರೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ₹50ಲಕ್ಷಕ್ಕೆ ಮಾರಿ ಸಾಹೇಬಗೌಡ ರುದ್ರಗೌಡರ ಎಂಬುವವರಿಗೆ ವಂಚಿಸಲಾಗಿದೆ.

ವಿಜಯಪುರ ಹತ್ತಿರದಲ್ಲೇ ಇರುವ ತೊರವಿ ಗ್ರಾಮದ ಸ.ನಂ.344 ಬಾರ್‌ 1ಬ ಬಾರ್‌ 1ರ 1ಎಕರೆ 36ಗುಂಟೆ ಜಮೀನಿನ ಖೊಟ್ಟಿ ದಾಖಲೆ ಸೃಷ್ಟಿಸಿ ₹25 ಲಕ್ಷಕ್ಕೆ ಮಾರಿ ಮಾರುತಿ ನಾರಾಯಣಕರ ಎಂಬುವವರಿಗೆ ವಂಚಿಸಲಾಗಿದೆ. ತಿಕೋಟಾದ ಸರ್ವೇ ನಂ.46ರ 14 ಎಕರೆ 7ಗುಂಟೆ ಜಮೀನಿನ ಖೊಟ್ಟಿ ದಾಖಲೆ ಸೃಷ್ಟಿಸಿ ₹25 ಲಕ್ಷಕ್ಕೆ ಮಾರಿ ಸಾಗರ ಕಸೆ ಎಂಬುವವರಿಗೆ ಮೋಸ ಮಾಡಲಾಗಿದೆ. ಸಿಂದಗಿ ತಾಲೂಕಿನ ಹೆಗಡಿಹಾಳ ಗ್ರಾಮದ ಸರ್ವೇ ನಂಬರ್ 13ರಲ್ಲಿರುವ 17ಎಕರೆ 3 ಗುಂಟೆ ಜಮೀನಿನ ಖೊಟ್ಟಿ ದಾಖಲೆ ತಯಾರಿಸಿ, ವಂಚಿಸಿರುವುದು ಬೆಳಕಿಗೆ ಬಂದಿದೆ.

ತಿಕೋಟಾ ತಾಲೂಕಿನ ಇಟ್ಟಂಗಿಹಾಳದ 252 ಬಾರ್‌ 2ರ 7ಎಕರೆ ಜಮೀನಿನ ಖೊಟ್ಟಿ ದಾಖಲೆ ನಿರ್ಮಿಸಿ ಶಿವಶಂಕರ ಬಿರಾದಾರ ಎಂಬುವವರಿಗೆ ಮಾರಾಟ ಮಾಡಲಾಗಿದೆ. ವಿಜಯಪುರ ತಾಲೂಕಿನ ಕಸಬಾದಲ್ಲಿರುವ ಸರ್ವೇ ನಂಬರ್ 15 ಬಾರ್‌ 4ರ 10ಗುಂಟೆ ಜಮೀನಿನ ಖೊಟ್ಟಿ ದಾಖಲೆ ಸೃಷ್ಟಿಸಿ ₹5 ಲಕ್ಷಕ್ಕೆ ಮಾರಿ ಶಂಕರ ಚವಾಣ ಎಂಬುವವರಿಗೆ ವಂಚಿಸಿರುವುದು ತಿಳಿದುಬಂದಿದೆ.

ಇಂಡಿ ತಾಲೂಕಿನ ಹಂಜಗಿ ಗ್ರಾಮದ ಪಿಡಿಒ ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೇ ಖಾಸಗಿ ವ್ಯಕ್ತಿಗಳಿಗೆ ಖರೀದಿ ಹಾಕಿ ಕೊಟ್ಟಿರುವ ಪ್ರಕರಣದಲ್ಲಿ ಸರ್ಕಾರಕ್ಕೇ ವಂಚಿಸಲಾಗಿದೆ. ಸಾಲು ಸಾಲು 20ಕ್ಕೂ ಹೆಚ್ಚು ನಡೆದಿರುವ ಆಸ್ತಿ ವಂಚನೆ ಪ್ರಕರಣಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಲೇ ಇದ್ದಾರೆ. ಆದರೂ ಜನರು ಮೋಸ ಹೋಗುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ಇಂತಹ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಜಯ ಜಾಧವ, ಖಾಜಾಅಮೀನ್ ಅತ್ತಾರ, ರೆಹಮತುಲ್ಲಾ ಸಾತಾರಕರ್, ಅಕ್ಬರಅಲಿ ಜುಮನಾಳ, ಅಶೋಕ ರಾಠೋಡ, ಸಂತೋಷ ದಳಪತಿ, ಮಹಮ್ಮದರಫೀಕ್ ತುರ್ಕಿ, ಪ್ರಕಾಶ ಚವ್ಹಾಣ, ಮೋಹನ ಹೆಗಡೆ ಸೇರಿದಂತೆ ಇದುವರೆಗೂ 15ಕ್ಕೂ ಅಧಿಕ ಜನರ ಬಂಧನವಾಗಿದೆ. ------------ ಕೋಟ್....

ದಸ್ತು ಬರಹಗಾರ ರಾಯಗೊಂಡ ಪೂಜಾರಿ ಅವರ ಬಳಿಗೆ ಬಂದಿದ್ದ ಆಸ್ತಿ ವ್ಯವಹಾರದಲ್ಲಿ ಹಿಂದೂ ಮಹಿಳೆಯರ ಹೆಸರಿನಲ್ಲಿದ್ದ ಆಸ್ತಿಗಳ ಮಾಲೀಕರು ಎಂದು ಮುಸ್ಲಿಂ ಮಹಿಳೆಯರು ಕಾಣುವ ಥರಹದ ಆಧಾರ್‌ಕಾರ್ಡ್ ಕೊಡಲಾಗಿತ್ತು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಾಂಡ್‌ ರೈಟರ್ ಪೂಜಾರಿ ನಮ್ಮ ಗಮನಕ್ಕೆ ತಂದ ತಕ್ಷಣ ನಾವು ಆದರ್ಶನಗರ ಠಾಣೆಗೆ ಮಾಹಿತಿ ತಲುಪಿಸಿದೆವು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

- ಬಿ.ಎಸ್.ಬಿರಾದಾರ, ಹಿರಿಯ ಉಪನೋಂದಣಾಧಿಕಾರಿ, ವಿಜಯಪುರ

---------------------

ಆಸ್ತಿ ವಂಚನೆಗಳಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಸುಮಾರು ಒಂಭತ್ತು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ, ತನಿಖೆ ಮುಂದುವರೆದಿದ್ದು ಆದಷ್ಟು ಬೇಗ ಎಲ್ಲ ಪ್ರಕರಣಗಳ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗುವುದು. ಇನ್ನು ಯಾರಾದರೂ ಈ ರೀತಿ ವಂಚನೆಗೆ ಒಳಗಾಗಿದ್ದರೆ ಧೈರ್ಯದಿಂದ ಬಂದು ದೂರು ದಾಖಲಿಸಿದರೆ, ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ತಮ್ಮ ಆಸ್ತಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವ ಅವಶ್ಯಕತೆ ಇದೆ.

- ಋಷಿಕೇಶ ಸೋನಾವಣೆ, ವಿಜಯಪುರ ಎಸ್ಪಿ

Share this article