ಬಿತ್ತನೆ ಬೀಜದ ಮೊಳಕೆ ಪರೀಕ್ಷೆ ಕಡ್ಡಾಯ: ವಿ.ಅನ್ಬುಕುಮಾರ್

KannadaprabhaNewsNetwork |  
Published : Jul 15, 2024, 01:48 AM IST
11ಕೆಎಂಎನ್ ಡಿ22 | Kannada Prabha

ಸಾರಾಂಶ

ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಬಿತ್ತನೆ ಬೀಜದ ಮೊಳಕೆ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ಮುಂದೆಯಾಗುವ ತೊಂದರೆ ತಡೆಗಟ್ಟಬಹುದು. ಜಿಲ್ಲೆಯಲ್ಲಿ ಕಳಪೆ ಅಥವಾ ಕಳಬೆರೆಕೆಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕಳಪೆ ಅಥವಾ ಕಳಬೆರೆಕೆಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಬಿತ್ತನೆ ಬೀಜದ ಮೊಳಕೆ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ಮುಂದೆಯಾಗುವ ತೊಂದರೆ ತಡೆಗಟ್ಟಬಹುದು ಎಂದರು.

ಮನೆ ಹಾನಿ ಪ್ರಕರಣಗಳು ಒಂದು ವಾರದೊಳಗೆ ವಿಲೇವಾರಿಯಾಗಬೇಕು. ಪ್ರಕೃತಿ ವಿಕೋಪದಿಂದ ಬಡವರ ಮನೆ ಹಾನಿಯಾದರೆ ಬೇಗ ರಿಪೇರಿ ಅಥವಾ ಮನೆ ಕಟ್ಟಿಕೊಳ್ಳಲು ಅನುಕೂಲವಗುವಂತೆ ಪರಿಹಾರ ಒದಗಿಸುವ ಕೆಲಸವನ್ನು ಸರಳೀಕರಣಗೊಳಿಸಲಾಗಿದೆ ಎಂದರು.

ಸಣ್ಣ ಪುಟ್ಟ ಮನೆ ಹಾನಿಯಾದಾಗ ಎರಡು ಅಥವಾ ಮೂರು ದಿನಗಳಲ್ಲಿ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿ ಇಲ್ಲವಾದಲ್ಲಿ ಅವರೆ ದುರಸ್ತಿ ಮಾಡಿಕೊಳ್ಳುತ್ತಾರೆ. ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ ಒಂದು ವಾರದೊಳಗೆ ಮನೆ ಹಾನಿ ಪರಿಹಾರ ಹಣ ಪಾವತಿಸಿ ಎಂದರು.

ಕುಡಿಯುವ ನೀರು ಸಮಸ್ಯೆ ಗಂಭೀರ ವಿಷಯ. ಗ್ರಾಪಂಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ನಿಗದಿತವಾಗಿ ನಡೆಯಬೇಕು. ಪರೀಕ್ಷೆ ನಡೆಸಿರುವ ಬಗ್ಗೆ ವರದಿ ಪಡೆದುಕೊಂಡು ಪರಿಶೀಲನೆ ನಡೆಸಬೇಕು. ಕಲುಷಿತ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ವಿದ್ಯಾರ್ಥಿಗಳು ಮಾಹೆವಾರು ನಡೆಸುವ ಪರೀಕ್ಷೆ ವರದಿಯನ್ನು ಗಣಕೀಕರಣ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ಮಾಹೆ ಪರಿಶೀಲನೆ ನಡೆಸಿದಾಗ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸಲು ಸಾಧ್ಯ ಎಂದರು.

ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ಗುಪ್ತಚರ ಕೆಲಸಗಳನ್ನು ಹೆಚ್ಚುಗೊಳಿಸಬೇಕು. ಕಂದಾಯ, ಗ್ರಾಪಂ, ಪೊಲೀಸ್ ಇಲಾಖೆ ಮೂರು ಇಲಾಖೆಗಳು ಅಂತರಿಕವಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಮಾಹಿತಿ ಕಲೆಹಾಕಿ, ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ನೋಡಿಕೊಳ್ಳಿ ಎಂದರು.

ಸೊಳ್ಳೆ ಕಡಿತ ಎಂದ ಕೂಡಲೇ ರಾತ್ರಿ ಮಾತ್ರ ಎಂದು ಜನರು ಭಾವಿಸಿಕೊಳ್ಳಬಾರದು. ಡೆಂಘೀ ರೋಗ ಹರಡುವ ಸೊಳ್ಳೆ ಬೆಳಗಿನ ಸಮಯದ ಸೊಳ್ಳೆ ಕಡಿತದಿಂದ ಉಂಟಾಗುತ್ತದೆ. ರಾತ್ರಿ ಸೇರಿದಂತೆ ಬೆಳಗಿನ ಸಮಯದಲ್ಲೂ ಸಹ ಸೊಳ್ಳೆ ಕಡಿತ ಉಂಟಾಗದಂತೆ ನೋಡಿಕೊಳ್ಳಿ. ಡೆಂಘೀ ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.

ಡೆಂಘೀ ಜ್ವರದ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಲ್ಲಿ ಮಾಡಿಕೊಂಡಿರುವ ಬೆಡ್ ವ್ಯವಸ್ಥೆ, ಔಷಧಗಳ ದಾಸ್ತಾನು ಕುರಿತು ಮಾಹಿತಿ ಪಡೆದುಕೊಂಡರು. ತಾಯಿ ಮರಣ ಪ್ರಕರಣಗಳು ವರದಿಯಾದ ತಕ್ಷಣ ಪರಿಶೀಲನೆ ನಡೆಸುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಪ್ರಮಾಣ, ಬೆಳೆ ಹಾನಿ, ಮನೆ ಹಾನಿ, ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳು, ಎನ್.ಎಚ್. ರಸ್ತೆಗಳು ಸೇರಿದಂತೆ ಜಿಲ್ಲೆಯ ಮಾಹಿತಿಯನ್ನು ಸಭೆಗೆ ನೀಡಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರು, ನರೇಗಾ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಜೆಜೆಎಂ, ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿಯನ್ನು ಸಭೆಗೆ ನೀಡಿದರು. ಸಭೆಯಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ