ವಸಂತಕುಮಾರ್ ಕತಗಾಲ
ಲಾರ್ಸೆನ್ ಮತ್ತು ಟೊಬ್ರೋ (ಎಲ್ ಆ್ಯಂಡ್ ಟಿ ), ಗುಜರಾತದ ಹಜಿರಾದಲ್ಲಿರುವ ಎ.ಎಂ. ನಾಯಕ ಹೆವಿ ಎಂಜಿನಿಯರಿಂಗ್ ಕಾಂಪ್ಲೆಕ್ಸ್‌ನಿಂದ ಈ ಸ್ಟೀಮ್ ಜನರೇಟರ್ ಅನ್ನು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿ ಕಳುಹಿಸಿದೆ. ಮೊದಲನೇ ಸ್ಟೀಮ್ ಜನರೇಟರ್ ಈಗಾಗಲೆ ಕೈಗಾಕ್ಕೆ ಆಗಮಿಸಿದೆ.
ಏನಿದು ಸ್ಟೀಮ್ ಜನರೇಟರ್?: ಪರಮಾಣು ಶಕ್ತಿ ಉತ್ಪಾದನೆಯಲ್ಲಿ ನಿರ್ಣಾಯಕವಾಗಿರುವ ಸ್ಟೀಮ್ ಜನರೇಟರ್ ಪರಮಾಣು ಕೋರ್‌ನಲ್ಲಿ ಉತ್ಪತ್ತಿಯಾಗುವ ಉಷ್ಣತೆಯನ್ನು ಬಳಸಿಕೊಂಡು ನೀರನ್ನು ಉಗಿಯಾಗಿ ಪರಿವರ್ತಿಸುವ ಶಾಖ ವಿನಿಮಯಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಟೀಮ್ ಜನರೇಟರ್ ಅನ್ನು ದೇಶೀಯವಾಗಿಯೇ ಉತ್ಪಾದಿಸಲಾಗಿದೆ.ನಡೆಯಲಿದೆ ಎರಡು ಸರ್ವೆ: ಕೈಗಾದಲ್ಲಿ 5 ಹಾಗೂ 6ನೇ ಘಟಕ ನಿರ್ಮಾಣಕ್ಕೆ ಮುನ್ನ ವನ್ಯಜೀವಿಗಳ ಸಂತತಿ ಹಾಗೂ ಆಹಾರದ ಪದ್ಧತಿಯ ಕುರಿತು ಸದ್ಯದಲ್ಲಿಯೇ ಸರ್ವೆ ನಡೆಯಲಿದೆ. ಚೆನೈನ ಹಸಿರು ಪೀಠದ ಸೂಚನೆ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಯಲಿದೆ. ಉದ್ದೇಶಿತ ಘಟಕಗಳಿಗೆ ಪರಿಸರ ಸಚಿವಾಲಯದ ಪರವಾನಗಿ ದೊರೆತಿದ್ದು, ಹಸಿರು ಪೀಠ ಈ ಸಮೀಕ್ಷೆ ವರದಿ ಆಧಾರದಲ್ಲಿ ಪರವಾನಗಿ ನೀಡುವುದನ್ನು ನಿರ್ಧರಿಸಲಿದೆ.
ಮಂಗಳೂರು ಯುನಿವರ್ಸಿಟಿಯಿಂದ ಕೈಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿದೆಯೇ ಎನ್ನುವ ಕುರಿತು ಹಾಗೂ ಬಳಸುವ ಆಹಾರದ ಬಗ್ಗೆ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆಯಲ್ಲಿ ಪೂರಕ ಅಂಶಗಳು ಕಂಡುಬಂದಲ್ಲಿ 5 ಹಾಗೂ 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ಹಸಿರು ಪೀಠದ ಪರವಾನಗಿ ಸುಲಭವಾಗಿ ದೊರೆಯಲಿದೆ.
5 ಹಾಗೂ 6ನೇ ಘಟಕ ನಿರ್ಮಾಣಕ್ಕೆ ಈಗಾಗಲೆ ಟೆಂಡರ್ ಕೂಡ ಆಗಿದೆ. ₹21 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 2029-30ರ ವೇಳೆಗೆ ವಿದ್ಯುತ್ ಉತ್ಪಾದನೆಗೆ ಸಜ್ಜಾಗಲಿದೆ. ಶೀಘ್ರ ಸಮೀಕ್ಷೆ: ಈಗಾಗಲೆ ಒಂದು ಸ್ಟೀಮ್ ಜನರೇಟರ್ ಕೈಗಾಕ್ಕೆ ಬಂದಿದೆ. ಇನ್ನೊಂದು ಸ್ಟೀಮ್ ಜನರೇಟರ್ ಗುಜರಾತಿನಿಂದ ಹೊರಟಿದ್ದು, ಆಗಸ್ಟ್ ಮೊದಲನೇ ವಾರದಲ್ಲಿ ಕೈಗಾಕ್ಕೆ ತಲುಪಲಿದೆ. ವನ್ಯಜೀವಿ ಹಾಗೂ ಆಹಾರ ಪದ್ಧತಿಯ ಸಮೀಕ್ಷೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಕೈಗಾ ಅಣು ವಿದ್ಯುತ್ ನಿಗಮದ ಸ್ಟೇಶನ್ ಡೈರೆಕ್ಟರ್ ಪ್ರಮೋದ ಜಿ. ರಾಯಚೂರ ತಿಳಿಸಿದರು.