ತ.ನಾಡಿಗೆ 1 ಟಿಎಂಸಿ ಬದಲು 8000 ಕ್ಯುಸೆಕ್‌

KannadaprabhaNewsNetwork |  
Published : Jul 15, 2024, 01:48 AM ISTUpdated : Jul 15, 2024, 06:55 AM IST
All party meeting 13 | Kannada Prabha

ಸಾರಾಂಶ

- ರಾಜ್ಯದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ- ಕಾವೇರಿ ಪ್ರಾಧಿಕಾರಕ್ಕೆ ಮೇಲ್ಮನವಿ ನಿರ್ಧಾರ

 ಬೆಂಗಳೂರು :  ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿ ದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪಾಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆ ವಿರೋಧ ವ್ಯಕ್ತಪಡಿಸಿದೆ.

ಅದರ ಬದಲು ಪ್ರತಿನಿತ್ಯ 8 ಸಾವಿರ ಕ್ಯೂಸೆಕ್‌ ನೀರು ಮಾತ್ರ ಬಿಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ತಮಿಳುನಾಡಿಗೆ ಜುಲೈ ಅಂತ್ಯದವರೆಗೆ ಪ್ರತಿದಿನ ಒಂದು ಟಿಎಂಸಿ (ನಿತ್ಯ 11,574 ಕ್ಯೂಸೆಕ್‌) ನೀರು ಬಿಡುವುದರ ಬದಲಾಗಿ ಸದ್ಯದ ಕಾವೇರಿ ಜಲಾನಯದ ಪ್ರದೇಶದ 4 ಜಲಾಶಯಗಳ ಜಲಸ್ಥಿತಿಗತಿ ಆಧರಿಸಿ ನಿತ್ಯ 8 ಸಾವಿರ ಕ್ಯೂಸೆಕ್‌ ನೀರು ಬಿಡಲು ನಿರ್ಧರಿಸಲಾಗಿದೆ. ಜತೆಗೆ ನಿತ್ಯ ಒಂದು ಟಿಎಂಸಿ ನೀರು ಬಿಡಲು ಆಗುವುದಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ನಿತ್ಯ 1 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಸಂಜೆ ಸರ್ವಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಲಾಯಿತು.

ಈ ವೇಳೆ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯದ ಸ್ಥಿತಿಯನ್ನು ಸಭೆಯ ಮುಂದಿಟ್ಟರು.

ಬಿಜೆಪಿಯಿಂದ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಜೆಡಿಎಸ್‌ನಿಂದ ಜಿ.ಟಿ.ದೇವೇಗೌಡ, ಎ.ಮಂಜು ಹಾಗೂ ಕಾವೇರಿ ಭಾಗದ ಶಾಸಕರು, ರೈತ ಸಂಘದ ಮುಖಂಡರು ಭಾಗವಹಿಸಿದ್ದರು.

ಸಭೆ ಬಳಿಕ ಸಭೆಯ ನಿರ್ಣಯ ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯಕ್ಕೆ ನಿತ್ಯ 8 ಸಾವಿರ ಕ್ಯೂಸೆಕ್‌ ನೀರು ಬಿಡಲು ನಿರ್ಧರಿಸಲಾಗಿದೆ. ಮಳೆಯ ಪ್ರಮಾಣ ಕಡಿಮೆ ಆದರೆ ನೀರು ಹರಿಯುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲಾಗುವುದು. ಉತ್ತಮ ಮಳೆಯಾದಲ್ಲಿ ಕಾವೇರಿ ನೀರು ನಿಯಂತ್ರಣಾ ಸಮಿತಿ ನಿಗದಿಪಡಿಸಿದಷ್ಟು ನೀರು ಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ ಶೇ.63 ಮಾತ್ರ ಭರ್ತಿ ನೀರು ಆಗಿದೆ. ಕಬಿನಿ ಜಲಾಶಯ ಭರ್ತಿಯಾಗಿದ್ದು, ಕಳೆದ ಎರಡು ದಿನ ಕ್ರಮವಾಗಿ 20 ಸಾವಿರ, 19 ಸಾವಿರ ಹಾಗೂ ಭಾನುವಾರ13 ಸಾವಿರ ಕ್ಯೂಸೆಕ್‌ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿಸಲಾಗಿದೆ. ಇದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದ ಪ್ರಮಾಣಕ್ಕಿಂತಲೂ ಹಚ್ಚಿದೆ.ಆದರೆ, ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, ಸಿಡಬ್ಲ್ಯೂಎಂಸಿ ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್‌ ನೀರು ಬಿಡಬೇಕಾಗುತ್ತದೆ. ಇದರ ಜೊತೆಗೆ ಮೇಲ್ಮನವಿಗೆ ಹೋಗೋಣ. ನಾವು ಮೊಂಡಾಟ ಮಾಡುತ್ತಿದ್ದೇವೆ ಎಂದು ಸಿಡಬ್ಲ್ಯೂಎಂಸಿಗೆ ಅನ್ನಿಸದಂತೆ ನಿಯಮಗಳನ್ನೂ ಪಾಲಿಸೋಣ ಎಂಬ ಸಲಹೆ ಬಂದಿದೆ. ಇದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈವರೆಗೆ 5 ಟಿಎಂಸಿ ನೀರು ಬಿಟ್ಟಿದ್ದೇವೆ:

ಅಡ್ವೊಕೇಟ್‌ ಜನರಲ್‌, ಕಾನೂನು ತಜ್ಞರು ವಸ್ತುಸ್ಥಿತಿ ತಿಳಿಸಿದ್ದರು. ಹೀಗಿದ್ದರೂ ಜು.11ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ 3ನೇ ಸಭೆಯಲ್ಲಿ ಜುಲೈ 12ರಿಂದ ಜುಲೈ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ ಒಂದು ಟಿಎಂಸಿಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿದ್ದಾರೆ.

ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಈಗ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿಗೂ ಹೆಚ್ಚು ನೀರು ಬಿಟ್ಟಿದ್ದೇವೆ.

ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜು.12ರಂದು ಸಭೆ ನಡೆಸಿ ನೀರು ಬಿಡದೇ ಇರಲು, ಸರ್ವಪಕ್ಷ ಸಭೆ ಕರೆಯಲು ಮತ್ತು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರಿದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಸರ್ವಪಕ್ಷ ಸಭೆ ನಡೆಸಿ ತೀರ್ಮಾನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.ಸಚಿವ ಸಂಪುಟದ ಸದಸ್ಯರು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್‌, ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾನೂನು ಪಾಲನೆ ಜತೆಗೆ ರೈತರ ಹಿತ ಮುಖ್ಯ: ಡಿಕೆಶಿ

ಕಾವೇರಿ ನೀರು ನಿಯಂತ್ರಣ ಸಮಿತಿಯು ವಾಡಿಕೆಯಂತೆ ಜುಲೈ ಅಂತ್ಯದಲ್ಲಿ ಸಭೆ ನಡೆಸಬೇಕಾಗಿತ್ತು. ಆದರೆ ಈ ಬಾರಿ ತ್ವರಿತವಾಗಿ ಸಭೆ ನಡೆಸಿ 20 ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ.

ನಾವು ಜಲಾಶಯಗಳಲ್ಲಿ ಶೇ.35ರಷ್ಟು ನೀರಿನ ಕೊರತೆ ಎದುರಿಸುತ್ತಿದ್ದೇವೆ. ಹೀಗಾಗಿ ಅಷ್ಟು ಪ್ರಮಾಣದ ನೀರು ಬಿಡಲಾಗುವುದಿಲ್ಲ. ಈ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮನವರಿಕೆ ಮಾಡಿಕೊಡುವ ಜತೆಗೆ ಕಾವೇರಿ ನೀರು ನಿರ್ವಹಣಾ ಸಮಿತಿಗಳಿಗೆ ಮೇಲ್ಮನವಿ ಸಲ್ಲಿಸಲಾಗುವುದು. ಕಾನೂನು ಪಾಲನೆ ಜತೆಗೆ ರೈತರ ಹಿತ ಕಾಯುವುದು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ