ಆಶಾಗಳಿಗೆ ಮಾಸಿಕ ₹ 15000 ಗೌರವ ಧನ ನೀಡಿ

KannadaprabhaNewsNetwork |  
Published : Dec 13, 2024, 12:46 AM IST
12ಡಿಡಬ್ಲೂಡಿ3ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ಗೌರವ ಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ರಾಜ್ಯದಲ್ಲಿ 42,000 ಆಶಾ ಕಾರ್ಯಕರ್ತೆಯರು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿಯ ಪಾಲುದಾರರಾಗಿದ್ದಾರೆ.

ಧಾರವಾಡ:

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ಗೌರವ ಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಂಘದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ ಮಾತನಾಡಿ,`ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 42,000 ಆಶಾ ಕಾರ್ಯಕರ್ತೆಯರು ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿಯ ಪಾಲುದಾರರಾಗಿದ್ದಾರೆ ಎಂದರು.

ಆಶಾ ಕಾರ್ಯಕರ್ತರಿಗೆ ಎಂಟು ವರ್ಷಗಳಿಂದ ಕೆಲಸಕ್ಕೆ ತಕ್ಕಂತೆ ಪ್ರೋತ್ಸಾಹ ಧನ ಸಿಗದೇ ವಂಚನೆಯಾಗುತ್ತಿದೆ. ಮೊಬೈಲ್ ಮೂಲಕ ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು. ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ವೆಚ್ಚಗಳಿಗೆ ಅನುಗುಣವಾಗಿ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ₹ 3 ಲಕ್ಷ ಪರಿಹಾರ ನೀಡಬೇಕು. ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಅವಧಿಯಲ್ಲಿ ಮೂರು ತಿಂಗಳು ನಿಶ್ಚಿತ ಗೌರವಧನ ಮತ್ತು ಪ್ರೋತ್ಸಾಹ ಧನ ನೀಡಬೇಕು. ಕಾರ್ಯಕರ್ತೆಯರು ಹಾಗೂ ಅವರ ಕುಟುಂಬಕ್ಕೆ ಉಚಿತ ಚಿಕಿತ್ಸೆ ದೊರೆಯುವಂತೆ ವಿಮೆ ಯೋಜನೆ ಜಾರಿಗೊಳಿಸಬೇಕು ಎಂದರು.

ಉಪಾಧ್ಯಕ್ಷೆ ಮಂಜುಳಾ ಗಾಡಗೋಳಿ ಮಾತನಾಡಿ, ಸ್ಮಾರ್ಟ್ ಫೋನ್ ಬಳಕೆಗೆ ಸಂಬಂಧಿಸಿದಂತೆ ಇಲಾಖೆ ಹೊರಡಿಸಿರುವ ಆದೇಶ ಕಾರ್ಯಕರ್ತೆಯರ ಕೆಲಸವನ್ನು ಹೆಚ್ಚು ಮಾಡಿದೆ. ಜಿಪಿಎಸ್ ಫೋಟೊ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷೆ ಗಿರಿಜಾ ಭೂಸನೂರಮಠ, ಜಯಶ್ರೀ ದೇಸಾಯಿ, ಭಾರತಿ ಶೆಟ್ಟರ್, ಶೋಭಾ ಹಿರೇಮಠ, ಸ್ವಪ್ನಾ ಸುಳ್ಳದ, ಸರೋಜಾ ಮಡಿವಾಳರ, ಶೈಲಾ ಮುದುಗಲ್ ಪಾಲ್ಗೊಂಡಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌