ಬಡ್ಡಿರಹಿತ ಕೃಷಿ ಸಾಲಕ್ಕೆ ₹1592 ಕೋಟಿ: ಡಿಕೆಶಿ

KannadaprabhaNewsNetwork |  
Published : Nov 15, 2026, 01:45 AM IST
Sahakara 5 | Kannada Prabha

ಸಾರಾಂಶ

ಕೃಷಿ ಚಟುವಟಿಕೆಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಬೆಳೆ ಸಾಲ ಮತ್ತು ಬಡ್ಡಿ ಸಹಾಯಧನ ಯೋಜನೆ ಅಡಿ ರೈತರಿಗೆ ಬಡ್ಡಿರಹಿತ ಸಾಲ ನೀಡಲು 1,592 ಕೋಟಿ ರು. ಮೀಸಲಿಟ್ಟಿದ್ದು, ಈವರೆಗೆ 17 ಲಕ್ಷ ರೈತರಿಗೆ 1135 ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಕೃಷಿ ಚಟುವಟಿಕೆಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಬೆಳೆ ಸಾಲ ಮತ್ತು ಬಡ್ಡಿ ಸಹಾಯಧನ ಯೋಜನೆ ಅಡಿ ರೈತರಿಗೆ ಬಡ್ಡಿರಹಿತ ಸಾಲ ನೀಡಲು 1,592 ಕೋಟಿ ರು. ಮೀಸಲಿಟ್ಟಿದ್ದು, ಈವರೆಗೆ 17 ಲಕ್ಷ ರೈತರಿಗೆ 1135 ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳ ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ ಸಹಕಾರ ಚಳವಳಿಯು ಜನರಿಗಾಗಿ, ಜನರಿಗೋಸ್ಕರ ಇರುವ ಚಳವಳಿಯಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬುದೇ ಸಹಕಾರ ತತ್ವದ ಮೂಲಮಂತ್ರ. ಸಹಕಾರ ಕ್ಷೇತ್ರ ರೈತರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ರಾಮಕೃಷ್ಣ ಹೆಗಡೆ ಅವರು ಕನಕಪುರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನಕಪುರ ತಾಲೂಕಿನ ಮುಖಂಡರು ನನ್ನನ್ನು ಟಿಎಪಿಸಿಎಂಎಸ್‌ ಚುನಾವಣೆಗೆ ನಿಲ್ಲಿಸಿದ್ದರು. ಮುಂದೆ ನಾನು ಸಹಕಾರ ಸಚಿವನಾಗಿಯೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತ್ತು. ಈಗ ಜನಸೇವಕನಾಗಿ, ಪ್ರಜಾಸೇವಕನಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದೇನೆ ಎಂದರು.

ರೈತರ ಆರ್ಥಿಕ ಶಕ್ತಿಗೆ ಪಿಎಲ್‌ಡಿ ಬ್ಯಾಂಕ್‌ ಸೇರಿ ಹಲವು ಸಂಘಗಳೇ ಪ್ರಮುಖ ಆಧಾರವಾಗಿದೆ. ಡಿಸಿಸಿ ಬ್ಯಾಂಕ್‌ಗಳು ಕೃಷಿ ಚಟುವಟಿಕೆಗಳಿಗೆ ಬಡ್ಡಿ ರಹಿತ ಸಾಲ ಒದಗಿಸುತ್ತಿವೆ. ರಾಜ್ಯದಲ್ಲಿ 25 ಲಕ್ಷ ರೈತರು ಹಾಲು ಉತ್ಪಾದಕರ ಸಂಘಗಳು ಸಹಕಾರ ಸಂಘಗಳ ಸದಸ್ಯರಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಸಹಕಾರ ಸಂಘಗಳು ಹಣಕಾಸಿನ ನೆರವು ನೀಡಿ ಬೆಳೆಸಿದವು. ಇವೆಲ್ಲವೂ ರಾಜ್ಯದ ರೈತರ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4.39 ಎಕರೆ ಪ್ರದೇಶದಲ್ಲಿ ಸರ್ಕಾರಿ ಕಾಲೇಜು ನಿರ್ಮಾಣ, ಉಲ್ಲಾಳದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ 101ಜನರಿಗೆ ಈ ವರ್ಷದ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ, ರಾಜ್ಯ ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷ, ಶಾಸಕ ಎಸ್‌.ಟಿ. ಸೋಮಶೇಖರ್‌, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಎಸ್‌. ರವಿ ಇತರರಿದ್ದರು.

2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ:

ಯಾರು ಏನೇ ಸುಳ್ಳು ಹೇಳಲಿ, ರಾಜಕೀಯ ತಂತ್ರಗಳನ್ನು ಮಾಡಲಿ. 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಪಂಚ ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿನ ದರ ಹೆಚ್ಚಳದ ಬಗ್ಗೆ ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಶಿವಕುಮಾರ್‌, ರೈತರಿಗೆ ಹೆಚ್ಚಿನ ಬೆಲೆ ದೊರೆಯಬೇಕು ಎಂಬ ಕಾರಣಕ್ಕಾಗಿ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿದೆ. ಅದರೆ ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆ ನಡೆಸಿದರು. ಅವರಿಗೆ ರೈತರ ಕಷ್ಟ, ಜಾನುವಾರುಗಳನ್ನು ಸಾಕುವ ಕಷ್ಟ, ಸಗಣಿ, ಗಂಜಲದ ವಾಸನೆ ತಿಳಿದಿಲ್ಲ. ಹಾಲು ಉತ್ಪಾದಕರ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು. ಗುಜರಾತ್‌ನ ಅಮುಲ್‌ ಸಂಸ್ಥೆ 1 ಲೀ. ಹಾಲನ್ನು 61ರಿಂದ 62 ರು.ಗೆ ಮಾರುತ್ತಿದೆ. ನಮ್ಮ ನಂದಿನಿ ಹಾಲು ದರ 54 ರು. ಆಗಿದೆ. ಬೆಲೆ ಏರಿಕೆ ಬಗ್ಗೆ ನಮಗೆ ಹೇಳುವುದಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಅಮೂಲ್‌ ಹಾಲಿನ ಬೆಲೆ ಕಡಿಮೆ ಮಾಡಲಿ ಎಂದು ಆಗ್ರಹಿಸಿದರು.ಅಪೆಕ್ಸ್‌ ಬ್ಯಾಂಕ್‌ನಲ್ಲಿ ಹಣ ಜಮೆ ಮಾಡಿಸಿ: ಹಾಲಿನ ಬೆಲೆ ಹೆಚ್ಚಳ ಮಾಡಿದ ದಿನವೇ ರಾಜ್ಯದಲ್ಲಿ 15 ಸಾವಿರ ಲೀ. ಹೆಚ್ಚುವರಿ ಹಾಲು ಉತ್ಪಾದನೆಯಾಗಿದೆ. ರೈತರು ಬೇರೆ ರಾಜ್ಯಗಳಿಗೆ ನೀಡುತ್ತಿದ್ದ ಹಾಲನ್ನು ನಮ್ಮ ಹಾಲು ಉತ್ಪಾದಕರಿಗೆ ನೀಡಲು ಆರಂಭಿಸಿದ್ದಾರೆ. ರೈತರ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅಪೆಕ್ಸ್‌ ಬ್ಯಾಂಕ್‌ ಸೇರಿ ಸಹಕಾರ ಬ್ಯಾಂಕ್‌ಗಳ ಬೆಳವಣಿಗೆಯಾಗಬೇಕಿದೆ. ಅದಕ್ಕಾಗಿ ಸರ್ಕಾರದ ಇಲಾಖೆ ಅಥವಾ ಸಂಸ್ಥೆಗಳ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜಮೆ ಮಾಡುವ ಬದಲು ಅಪೆಕ್ಸ್‌ ಬ್ಯಾಂಕ್‌ನಲ್ಲಿಡುವಂತೆ ಮುಖ್ಯಮಂತ್ರಿ ಅವರು ಆದೇಶಿಸಬೇಕು. ಹಾಗೆಯೇ, ಮುಂದಿನ ಬಜೆಟ್‌ನಲ್ಲಿ ಸಹಕಾರ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಸಿಎಂ ಹೊಗಳಿದ ಎಸ್‌ಟಿಎಸ್‌:

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹಾಡಿಹೊಗಳಿದ ಶಾಸಕ ಎಸ್‌.ಟಿ. ಸೋಮಶೇಖರ್‌, ನಮ್ಮ ಮೆಟ್ರೋ ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ನಡೆದುಕೊಂಡ ರೀತಿ ನಮ್ಮ ಮುಖ್ಯಮಂತ್ರಿಗಳ ಸಾಮರ್ಥ್ಯ ಏನೆಂದು ತೋರಿಸುತ್ತದೆ. ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ನಂ.1 ಮುಖ್ಯಮಂತ್ರಿ. ಜನರ ಒಳಿತಿಗಾಗಿ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿದರು.

ರಾಜಕೀಯಕ್ಕಿಂತ ಸೇವೆಯೇ ಮುಖ್ಯ:ಸಹಕಾರ ಕ್ಷೇತ್ರದಲ್ಲಿ ರಾಜಕೀಯಕ್ಕಿಂತ ಸೇವೆಯೇ ಮುಖ್ಯ. ಸಹಕಾರ ಕ್ಷೇತ್ರವೇ ಒಂದು ಪಕ್ಷದಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಒಂದು ಬಾರಿ ಸ್ಥಾನ ಸಿಕ್ಕರೆ ಅದರಿಂದ ಮತ್ತೆ ಇಳಿಯುವುದಿಲ್ಲ. ಜಿ.ಟಿ.ದೇವೇಗೌಡ, ಎಸ್‌.ಟಿ.ಸೋಮಶೇಖರ್‌ ಅವರು 20-30 ವರ್ಷಗಳಿಂದ ಮಹಾಮಂಡಳದ ಅಧ್ಯಕ್ಷರಾಗಿಯೇ ಮುಂದುವರಿದಿದ್ದಾರೆ. ಸರ್ಕಾರ ಬದಲಾದರೂ ನಾಯಕತ್ವ ಬದಲಿಸಲಾಗದು. ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವಾಗ ಕೆಲ ಅಧ್ಯಕ್ಷ ಸ್ಥಾನ ಕೂತವನದೇ ಖುರ್ಚಿಎಂಬಂತಾಗಿದೆ ಎಂದು ಹೇಳಿದ್ದೆ. ಸಹಕಾರ ಕ್ಷೇತ್ರದಲ್ಲಿ ಅದೇ ರೀತಿ ಆಗಿದೆ ಎಂದು ನಗುತ್ತಾ ಹೇಳಿದರು.ಡಿಸಿಸಿ ಬ್ಯಾಂಕ್‌ ಹಾಗೂ ಪಿಡಿ ಬ್ಯಾಂಕ್‌ಗಳ ಮೂಲಕ ದೀರ್ಘಾವಧಿ ಮತ್ತು ಸುಸ್ಥಿರ ಸಾಲ ಕಲ್ಪಿಸಲಾಗುತ್ತಿದೆ. 75 ಸಾವಿರ ಕುಟುಂಬಗಳಿಗೆ 1,551 ಕೋಟಿ ರು. ಸಾಲ ವಿತರಿಸಲಾಗಿದೆ. ಕ್ಷೀರದಾನ ಯೋಜನೆ ಅಡಿ ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 5 ರು. ಪ್ರೋತ್ಸಾಹಧನ ನೀಡಲಾಗುತ್ತಿದೆ. ಯಶಸ್ವಿನಿ ಯೋಜನೆಯಡಿ 52 ಲಕ್ಷ ಸದಸ್ಯರನ್ನು ಒಳಗೊಂಡಿದ್ದು, 9,450 ಆಸ್ಪತ್ರೆಗಳನ್ನು ಜಾಲಬಂಧಕ್ಕೆ ಸೇರಿಸಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿಯಿಂದ ಮುನಿರಾಬಾದ್‌ನತ್ತ ಹೆಜ್ಜೆ ಹಾಕಿದ ನೂರಾರು ರೈತರು
ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಅಶೋಕ ಶಿಗ್ಗಾಂವಿ