ಇದು ಕೇವಲ ಒಂದು ಗ್ರಾಮದ ಅಥವಾ ತಾಲೂಕಿನ ರೈತರ ಸಮಸ್ಯೆಯಲ್ಲ. ಕಾಲುವೆ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿರುವ ಜಿಲ್ಲೆಯ ಸಮಸ್ತ ರೈತರ ಬದುಕಿನ ಪ್ರಶ್ನೆಯಾಗಿದೆ
ಕಂಪ್ಲಿ: ಎಲ್ಎಲ್ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳ ರಕ್ಷಣೆಗಾಗಿ ಡಿ. 15ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಕಂಪ್ಲಿಯಿಂದ ಮುನಿರಾಬಾದ್ವರೆಗೆ ಬೃಹತ್ ರೈತರ ಪಾದಯಾತ್ರೆ ನಡೆಯಿತು.
ಪಟ್ಟಣದ ಉದ್ಭವ ಗಣಪತಿ ದೇವಸ್ಥಾನದ ಆವರಣದಿಂದ ಆರಂಭವಾದ ಪಾದಯಾತ್ರೆಯಲ್ಲಿ ರೈತ ಸಂಘದ ಮುಖಂಡರು, ರೈತರು ಹಾಗೂ ವಿವಿಧ ಗ್ರಾಮಗಳ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಎಲ್ಎಲ್ ಕಾಲುವೆ ವ್ಯಾಪ್ತಿಯ ರೈತರು ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದು, ಬಹುತೇಕ ಬೆಳೆ ಸದ್ಯ ನಿರ್ಣಾಯಕ ಬೆಳವಣಿಗೆಯ ಹಂತದಲ್ಲಿವೆ. ಈ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದಿದ್ದರೆ ವರ್ಷವಿಡೀ ಶ್ರಮಪಟ್ಟು ಬೆಳೆದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದರು.
ರೈತರ ಬೆಳೆ ಉಳಿಸುವ ದೃಷ್ಟಿಯಿಂದ ಡಿ.15ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಹಲವು ಬಾರಿ ಮನವಿ, ಸಭೆ ಹಾಗೂ ಹೋರಾಟಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಹೀಗಾಗಿ ರೈತರ ಹಕ್ಕಿನ ನೀರಿಗಾಗಿ ಪಾದಯಾತ್ರೆ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.ಇದು ಕೇವಲ ಒಂದು ಗ್ರಾಮದ ಅಥವಾ ತಾಲೂಕಿನ ರೈತರ ಸಮಸ್ಯೆಯಲ್ಲ. ಕಾಲುವೆ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿರುವ ಜಿಲ್ಲೆಯ ಸಮಸ್ತ ರೈತರ ಬದುಕಿನ ಪ್ರಶ್ನೆಯಾಗಿದೆ. ರೈತರ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಎಲ್ಲ ರೈತರು ಹಾಗೂ ರೈತಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಬೇಕು. ಬೆಳೆಗಳಿಗೆ ಅಗತ್ಯ ನೀರು ದೊರೆಯುವವರೆಗೂ ಒಗ್ಗಟ್ಟಿನ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ರೈತರು ನೀರು ಕೊಡಿ, ಇಲ್ಲ ವಿಷ ಕೊಡಿ, ನೀವೇ ನಿರ್ಧರಿಸಿ ಎಂಬ ಘೋಷಣೆ ಕೂಗುವ ಮೂಲಕ ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೆಳೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕಾಧ್ಯಕ್ಷ ವಿರೇಶ್, ಕ.ಮ.ಹೇಮಯ್ಯಸ್ವಾಮಿ, ಕುರಿ ಹುಸೇನಪ್ಪ, ಆದೋನಿ ನಿಂಗಪ್ಪ, ಟಿ.ವಿರೂಪಣ್ಣ, ಡಿ.ಎಂ. ಗೌರೀಶ್, ಕಂಪ್ಲಿ ನಗರ ಅಧ್ಯಕ್ಷ ತಿಮ್ಮಪ್ಪ ನಾಯಕ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ವೆಂಕಟರಮಣ, ಖಜಾಂಚಿ ಗಂಗಣ್ಣ ಸೇರಿದಂತೆ ಎಲ್ಎಲ್ಸಿ ಕಾಲುವೆ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.