ಹಿಂದುಗಳು ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಮಗೆ ಯಾವುದೇ ರಾಜಕೀಯ ಪಕ್ಷದ ಚಟುವಟಿಕೆಯಲ್ಲಿ ಆಸಕ್ತಿಯಿದ್ದರೂ, ಅದರಲ್ಲಿ ತೊಡಗಿಕೊಂಡಿದ್ದರೂ ನಮ್ಮ ಜಾತಿ, ಧರ್ಮವನ್ನು ದೇವರ ಕೋಣೆಯಲ್ಲೇ ಇಟ್ಟುಕೊಳ್ಳಬೇಕು.
ಯಲ್ಲಾಪುರ: ಶತಶತಮಾನಗಳಿಂದ ಪರಕೀಯರು ದಾಳಿ ನಡೆಸಿದರೂ ಭಾರತೀಯ ಸನಾತನ ಹಿಂದೂ ಧರ್ಮ ಇಂದಿಗೂ ಉಳಿದಿದೆ. ಜಗತ್ತಿನಲ್ಲಿ ನೂರು ಕೋಟಿ ಹಿಂದುಗಳಿದ್ದಾರೆ. ಅವರಿಗೆಲ್ಲ ಒಂದೇ ರಾಷ್ಟ್ರ ಭಾರತ. ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ನೀಡಿದ ವೇದ, ಉಪನಿಷತ್ತು, ಪೂಜೆ, ಪುನಸ್ಕಾರ ಇವುಗಳ ಆಚರಣೆಯಿಂದ ಹಿಂದೂ ಧರ್ಮವನ್ನು ಯಾರಿಂದಲೂ ಅಲುಗಾಡಿಸಲಾಗಲಿಲ್ಲ ಎಂದು ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.
ಶುಕ್ರವಾರ ಪಟ್ಟಣದ ಶಕ್ತಿಗಣಪತಿ ದೇವಸ್ಥಾನದಲ್ಲಿ ಸ್ಪಂದನ ಯುವಕ ಸಂಘ, ಹಾಗೂ ಆದರ್ಶ ಮಹಿಳಾ ಸಂಘದ ವತಿಯಿಂದ ೧೫ ದಿನಗಳ ಕಾಲ ಹಮ್ಮಿಕೊಂಡ ೧೩ನೇ ಕಾರ್ತಿಕೋತ್ಸವದಲ್ಲಿ ದೀಪೋತ್ಸವ, ಭಜನೆ, ಗೀತಾಭಿಯಾನ, ತಾಳಮದ್ದಲೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.ಹಿಂದುಗಳು ನಮ್ಮತನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನಮಗೆ ಯಾವುದೇ ರಾಜಕೀಯ ಪಕ್ಷದ ಚಟುವಟಿಕೆಯಲ್ಲಿ ಆಸಕ್ತಿಯಿದ್ದರೂ, ಅದರಲ್ಲಿ ತೊಡಗಿಕೊಂಡಿದ್ದರೂ ನಮ್ಮ ಜಾತಿ, ಧರ್ಮವನ್ನು ದೇವರ ಕೋಣೆಯಲ್ಲೇ ಇಟ್ಟುಕೊಳ್ಳಬೇಕು. ನಾವು ಅಗ್ನಿ ಆರಾಧಕರು. ಭಗವದ್ಗೀತೆಯಲ್ಲಿ ಭಗವಂತ ೧೮ ಅಧ್ಯಾಯಗಳ ಮೂಲಕ ನಾವು ಹೇಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂಬುದನ್ನು ತಿಳಿಸಿದ್ದಾನೆ. ಭಗವದ್ಗೀತೆ ಸರ್ವಮತಗ್ರಂಥ. ಗೀತೆ ಉಳಿದ ಧರ್ಮಗ್ರಂಥದಂತಲ್ಲ. ಹಾಗಾಗಿಯೇ ಪಾಶ್ಚಾತ್ಯ ವಿದ್ವಾಂಸರು ಭಗವದ್ಗೀತೆಯನ್ನು ಅಧ್ಯಯನ ಮಾಡಿ, ಗೀತೆ ವಿಶ್ವದೆಲ್ಲೆಡೆ ಅತಿ ಹೆಚ್ಚು ಮುದ್ರಣಗೊಂಡ ಗ್ರಂಥವಾಗಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಾವು ಹಿಂದುಗಳ ಮೇಲೆ ಅನ್ಯಾಯ, ದಾಳಿ ನಡೆದರೆ ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಮೊನ್ನೆಯಷ್ಟೇ ನಡೆದ ಮುಂಡಗೋಡಿನ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಇಂತಹ ಘಟನೆಗಳು ಆಗಾಗ ದೇಶದೆಲ್ಲೆಡೆ ನಡೆದರೂ ಹಿಂದುಗಳು ತಲೆ ಎತ್ತಿ ಮಾತನಾಡುವ ಹಕ್ಕನ್ನೇ ಕಳೆದುಕೊಂಡಂತಿದೆ ಎಂದರು.ಲೆಕ್ಕಪರಿಶೋಧಕ ಎಸ್.ಎಂ. ಭಟ್ಟ ಮಾತನಾಡಿ, ಧರ್ಮದ ಜಾಗೃತಿ ಭಾಷಣ ಕೇಳುವುದರಿಂದ ಆಗದು. ಮನೆಯಿಂದಲೇ ನಮ್ಮ ಮಕ್ಕಳಿಗೆ ಸಂಸ್ಕಾರ, ಅದರ ಆಚರಣೆ ಪ್ರಾರಂಭಗೊಳ್ಳಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯನವರಮಠ ದೀಪೋತ್ಸವ, ಗೀತಾಭಿಯಾನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ ಉಪಸ್ಥಿತರಿದ್ದರು. ಲಕ್ಷ್ಮಿ ಶಂಕರ ಭಟ್ಟ, ಸುವರ್ಣ ಹೆಗಡೆ ಭಗವದ್ಗೀತೆ ಪಠಿಸಿದರು. ಉಷಾ ಗಾಂವ್ಕರ ಸ್ವಾಗತಿಸಿದರು. ಸಂಚಾಲಕ ಸುಬ್ರಾಯ ಭಟ್ಟ ಆನೆಜಡ್ಡಿ ನಿರ್ವಹಿಸಿದರು. ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಗೀತಾ ಮೆಣಸುಮನೆ ವಂದಿಸಿದರು.