ಗದಗ: ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಾರಾಧನೆ ಹಿನ್ನೆಲೆ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ, ಗವಾಯಿಗಳ ಆರಾಧನೆ, ಅನ್ನಸಂತರ್ಪಣೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪರಿಕರಗಳೊಂದಿಗೆ ಗಾನಯೋಗಿ ಪುಟ್ಟರಾಜ ಗವಾಯಿಗಳು ರಚಿಸಿದ ಭಕ್ತಿ ಹಾಡುಗಳನ್ನು ಭಕ್ತರು ಹಾಡುವ ಮೂಲಕ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು. ಪುಣ್ಯಸ್ಮರಣೆ ಹಿನ್ನೆಲೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಪುಟ್ಟರಾಜ ಗವಾಯಿಗಳ ಕರ್ತೃ ಗದ್ದುಗೆಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು.ವಿವಿಧ ಭಾಗದ ಸಾವಿರಾರು ಭಕ್ತರು ಪುಣ್ಯಾಶ್ರಮಕ್ಕೆ ಆಗಮಿಸಿ, ದರ್ಶನಾಶೀರ್ವಾದ ಪಡೆದರು. ಬೆಳಗ್ಗೆಯಿಂದ ಸಂಜೆ ವರೆಗೆ ಆಶ್ರಮದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾದರು. ಧಾರ್ಮಿಕ ಕಾರ್ಯಕ್ರಮದೊಂದಿಗೆ ದಿನವಿಡೀ ಆಶ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆದವು. ಅಂಧರ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆ ಮೂಲಕ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಿದರು.ಬೆಳಗ್ಗೆ 7 ಗಂಟೆಯಿಂದಲೇ ನಗರದ ಗಾಂಧಿ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಆಟೋ ಚಾಲಕರ, ಮಾಲೀಕರು ಸಣ್ಣ ಸಣ್ಣ ವ್ಯಾಪಾರಿಗಳು, ಪ್ರತಿಯೊಂದು ಗ್ರಾಮಗಳಲ್ಲಿನ ಭಕ್ತರು ಪೆಂಡಾಲ್ ಗಳನ್ನು ಹಾಕಿ ಪುಟ್ಟರಾಜರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಪುಟ್ಟಯ್ಯಜ್ಜನವರ ಸ್ಮರಣೆ ಮಾಡಿದರು. ರಾಜೀವಗಾಂಧಿನಗರ ಗೆಳೆಯರ ಬಳಗ, ಗದಗ-ಬೆಟಗೇರಿ ನಗರಸಭೆ, ಟ್ಯಾಗೋರ ರಸ್ತೆಯಲ್ಲಿರುವ ಆದರ್ಶ ಗಜಾನನ ಸಮಿತಿ, ನಗರದ ಪುಟ್ಟಯ್ಯಜ್ಜ ವೃತ್ತದ ಬಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಪುಟ್ಟರಾಜ ಕವಿ ಗವಾಯಿಗಳರವರ ಆರಾಧನೆ ಕಾರ್ಯಕ್ರಮ ಹಾಗೂ ಮಹಾ ಅನ್ನಸಂತರ್ಪಣೆ ಜರುಗುದವು.