ನಿರಂತರ ಮಳೆಗೆ 23 ಸಾವಿರ ಹೆಕ್ಟೇರ್‌ ಬೆಳೆಹಾನಿ!

KannadaprabhaNewsNetwork |  
Published : Sep 03, 2025, 01:01 AM IST
2ಎಚ್‌ವಿಆರ್‌2 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ಬಿತ್ತನೆಯ ಬಹುಪಾಲು ಕ್ಷೇತ್ರವನ್ನು ಈ ಬೆಳೆಯೇ ಆವರಿಸಿಕೊಂಡಿದೆ.

ಹಾವೇರಿ: ಪ್ರಸಕ್ತ ವರ್ಷದ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 23 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆಹಾನಿಯಾಗಿದ್ದು, ರೈತರು ಪರಿಹಾರಕ್ಕಾಗಿ ಸರ್ಕಾರದ ಎದುರು ಅಂಗಲಾಚುವಂತಾಗಿದೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3.27 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಲ್ಲಿ ಶೇ. 98ರಷ್ಟು ಬಿತ್ತನೆಯಾಗಿದೆ. ಮೇ ಅಂತ್ಯದಲ್ಲೇ ಬಹುತೇಕ ರೈತರು ಬಿತ್ತನೆ ಆರಂಭಿಸಿ ಜೂನ್‌ನಲ್ಲಿ ಬಹುತೇಕ ಬಿತ್ತನೆ ಪೂರ್ಣಗೊಳಿಸಿದ್ದರು.

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ಬಿತ್ತನೆಯ ಬಹುಪಾಲು ಕ್ಷೇತ್ರವನ್ನು ಈ ಬೆಳೆಯೇ ಆವರಿಸಿಕೊಂಡಿದೆ. ಇದಲ್ಲದೇ ಸೋಯಾಬಿನ್, ಹತ್ತಿ, ಶೇಂಗಾ, ಹಸಿ ಮೆಣಸಿನಕಾಯಿ ಮುಂತಾದ ಬೆಳೆ ಬೆಳೆದಿದ್ದಾರೆ. ಈವರೆಗೆ ಸುರಿದ ಮಳೆಯಿಂದಾಗಿ ಬ್ಯಾಡಗಿ ತಾಲೂಕಿನಲ್ಲಿ 6,357 ಹೆಕ್ಟೇರ್‌, ಹಾನಗಲ್ಲ ತಾಲೂಕಿನಲ್ಲಿ 5,980 ಹೆಕ್ಟೇರ್‌, ಹಿರೇಕೆರೂರು 5,180 ಹೆಕ್ಟೇರ್‌, ಹಾವೇರಿ ತಾಲೂಕಿನಲ್ಲಿ 320 ಹೆಕ್ಟೇರ್‌, ರಟ್ಟೀಹಳ್ಳಿ 4,230 ಹೆಕ್ಟೇರ್‌, ಸವಣೂರು 76 ಹೆಕ್ಟೇರ್‌, ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 469 ಹೆಕ್ಟೇರ್‌ ಸೇರಿದಂತೆ ಒಟ್ಟು 22,612 ಹೆಕ್ಟೇರ್‌ ಕೃಷಿ ಬೆಳೆಗಳು ಹಾನಿಯಾಗಿವೆ. ಅದೆ ರೀತಿ 419 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

ಈ ಬಾರಿ ಸುರಿದ ವಾಡಿಕೆಗಿಂತ ಹೆಚ್ಚು ಮಳೆಗೆ ಜಿಲ್ಲೆಯ ಹಾನಗಲ್ಲ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಹಾವೇರಿ, ಸವಣೂರು ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ ರೈತರು ಬೆಳೆದ ಬೆಳೆಹಾನಿಗೊಳಗಾಗಿವೆ. ಕೆಲವೊಮ್ಮೆ ಜೋರು ಮಳೆಗೆ, ಮತ್ತೊಮ್ಮೆ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ.

ಕೆಲ ತಾಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದರೆ, ಇನ್ನೂ ಕೆಲವೆಡೆ ಭಾಗಶಃ ಹಾನಿಯಾಗಿವೆ. ನದಿಪಾತ್ರದ ಜಮೀನುಗಳಲ್ಲಿ ನೀರು ರೈತರ ಹೊಲಕ್ಕೆ ನುಗ್ಗಿ ಬೆಳೆಗಳು ಹಾಳಾಗಿವೆ. ಏತನ್ಮಧ್ಯೆ ಕೆಲವು ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದ್ದರೂ ಬೆಳೆಗಳು ಕೈಸೇರುವ ನಿರೀಕ್ಷೆ ಮಾತ್ರ ಹುಸಿಯಾಗುತ್ತಿದೆ.

ಹಾಗಾಗಿ ಬಿತ್ತನೆ ಬೀಜ, ರಸಗೊಬ್ಬರ, ಆಳು ಕಾಳು ಖರ್ಚು, ಬಿತ್ತನೆ ಖರ್ಚು ಹೀಗೆ ಎಕರೆಗೆ ಹತ್ತಾರು ಸಾವಿರ ರು. ಖರ್ಚು ಮಾಡಿರುವ ರೈತರಿಗೆ ಈಗ ಬೆಳೆಹಾನಿಯಿಂದ ಆರ್ಥಿಕ ಹೊಡೆತ ಬಿದ್ದಂತಾಗಿದೆ. ಅದಕ್ಕಾಗಿ ಸೂಕ್ತ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕೆಂದು ಜಿಲ್ಲೆಯ ರೈತರು ಒತ್ತಾಯಿಸುತ್ತಿದ್ದಾರೆ. ಪರಿಹಾರಕ್ಕೆ ರೈತರ ಒತ್ತಾಯ: ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದರಿಂದ ಬೆಳೆ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಸುಮಾರು 43 ಸಾವಿರಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 12 ಸಾವಿರ, ಹಿರೇಕೆರೂರು 10,500, ರಟ್ಟೀಹಳ್ಳಿ 10 ಸಾವಿರ, ಹಾನಗಲ್ಲ 7,500, ಹಾವೇರಿ ತಾಲೂಕಿನಲ್ಲಿ 3 ಸಾವಿರ ಹೀಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರೈತರಿಂದ ಅರ್ಜಿ ಸ್ವೀಕರಿಸಿದ ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಜಂಟಿ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದಾರೆ.ಅದೇ ರೀತಿ ಪ್ರತಿವರ್ಷದಂತೆ ಬೆಳೆವಿಮೆ ತುಂಬಿರುವ ರೈತರು ವಿಮೆ ಪರಿಹಾರಕ್ಕೂ ಒತ್ತಾಯಿಸುತ್ತಿದ್ದಾರೆ. ಬೆಳೆಹಾನಿ ಪರಿಹಾರಕ್ಕಾಗಿ ಅರ್ಜಿ ಕೊಟ್ಟು ಕಾಯುತ್ತಿರುವ ರೈತರು ಇದುವರೆಗೆ ಸಹನೆಯಿಂದಲೇ ಕಾಯುತ್ತಿದ್ದಾರೆ. ಆದರೆ, ಇದಕ್ಕೆ ಸರ್ಕಾರ, ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಗದ್ದರಿಂದ ರೈತರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಮಧ್ಯಂತರ ಬೆಳೆ ಪರಿಹಾರ ನೀಡದಿದ್ದರೆ ವಿಭಿನ್ನ ಹೋರಾಟ ನಡೆಸಲು ರೈತರು ಚಿಂತನೆ ನಡೆಸಿದ್ದಾರೆ. ಬೇಡಿಕೆಗೆ ಸ್ಪಂದಿಸಲಿ: ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ಸರ್ಕಾರ ಬದಲಾಯಿಸಬೇಕು. ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಪರಿಹಾರ ಕೊಡುತ್ತಿಲ್ಲ. ಶೀಘ್ರದಲ್ಲೇ ಬೆಳೆಹಾನಿ ಪರಿಹಾರ ನೀಡದಿದ್ದರೆ ದೊಡ್ಡ ಪ್ರಮಾಣದ ಜನಾಂದೋಲನ ಮಾಡುತ್ತೇವೆ. ಈಗಲೇ ಸರ್ಕಾರ ಎಚ್ಚೆತ್ತು ಅನ್ನದಾತರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.ಸರ್ಕಾರಕ್ಕೆ ವರದಿ: ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲೆಯ ರೈತರಿಂದ 43 ಸಾವಿರಕ್ಕೂ ಅಕ ಅರ್ಜಿಗಳು ಬಂದಿವೆ. ಈಗಾಗಲೇ ಜಿಲ್ಲಾಡಳಿತಕ್ಕೆ ಅಂದಾಜು ವರದಿ ಸಲ್ಲಿಸಿದ್ದು, ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ, ಹಾವೇರಿ, ಶಿಗ್ಗಾಂವಿ ತಾಲೂಕಿನಲ್ಲಿ ಜಂಟಿ ಸರ್ವೇ ಮಾಡಲಾಗುತ್ತಿದೆ. ಸರ್ವೇ ಮುಗಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ತಿಳಿಸಿದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ