ಹಾವೇರಿ: ಹಾಸ್ಟೆಲ್, ವಸತಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ, ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ, ವಸತಿನಿಲಯಗಳಿಗೆ ಸ್ವಂತ ಕಟ್ಟಡ, ಕನಿಷ್ಠ ಮೂಲ ಸೌಕರ್ಯಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಗುರುಭವನದಲ್ಲಿ ಅ. 4 ಮತ್ತು 5ರಂದು ಎಸ್‌ಎಫ್‌ಐ ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಶಿವಪ್ಪ ಅಂಬ್ಲಿಕಲ್ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹೀಗೆ ಸುಮಾರು 6 ಸಾವಿರಕ್ಕೂ ಅಧಿಕ ಹಾಸ್ಟೆಲ್‌ಗಳಿದ್ದು, 7.50 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಸತಿ ಇದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳು ಸಿಗದಿರುವುದು ವಿಪರ್ಯಾಸವಾಗಿದೆ. ಸರ್ಕಾರ ಒಂದು ವಿದ್ಯಾರ್ಥಿಗೆ ದಿನಕ್ಕೆ ₹60ರಂತೆ ತಿಂಗಳಿಗೆ ₹1850 ಮಾತ್ರ ನೀಡುತ್ತಿದೆ. ಎಸ್‌ಎಫ್‌ಐ ₹3500ಕ್ಕೆ ಬೇಡಿಕೆ ಇಟ್ಟರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಸ್ಟೆಲ್ ಬಯಸಿ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸವಲತ್ತು ಸಿಗುತ್ತಿಲ್ಲ ಎಂದರು.ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ಪರಿಮಳಾ ಜೈನ್ ಮಾತನಾಡಿ, ಶಿಕ್ಷಣದ ಕನಸು ಹೊತ್ತು ಬರುವ ವಿದ್ಯಾರ್ಥಿಗಳೀಗೆ ಹಾಸ್ಟೆಲ್ ಅವ್ಯವಸ್ಥೆ ಮೂಲ ಕಾರಣವಾಗಿದೆ. ಹಾಸ್ಟೆಲ್ ಸುಧಾರಣೆಯಾಗುವವರೆಗೆ ಶಿಕ್ಷಣ ವ್ಯವಸ್ಥೆ ಸುಧಾರಿಸಲ್ಲ. ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದರು.