ಖಾತೆಯಿಂದ ಹಣ ಲಪಟಾಯಿಸಿದ ವಂಚಕರು । ಸೈಬರ್ ಕ್ರೈಂಗೆ ದೂರುಅಮರೇಶ್ವರಸ್ವಾಮಿ ಕಂದಗಲ್ಲಮಠ
ಕನ್ನಡಪ್ರಭ ವಾರ್ತೆ ಕುಕನೂರುಕೈಯಲ್ಲಿ ಹಣವಿದ್ದರೆ ಸುರಕ್ಷಿತತಲ್ಲ ಎಂದು ಖಾತೆಯಲ್ಲಿ ಜಮಾ ಇಡುವುದುಂಟು. ಸದ್ಯ ಸುರಕ್ಷಿತ ಎಂದು ಭಾವಿಸಿದ್ದ ಖಾತೆಗಳಿಗೆ ಖದೀಮರು ಗಪ್ ಚುಪ್ ಕನ್ನ ಹಾಕಿದ್ದಾರೆ. ಇಂತಹ ಪ್ರಕರಣ ಕುಕನೂರು ಪಟ್ಟಣದ ನಾಲ್ವರು ವ್ಯಕ್ತಿಗಳಿಗೆ ವಾರದಲ್ಲಿಯೇ ಆಗಿದ್ದು, ಹಣ ಕಳೆದುಕೊಂಡವರು ನಿತ್ಯ ಮರುಗುತ್ತಿದ್ದಾರೆ. ನಾಲ್ವರ ಖಾತೆಯಿಂದ ಬರೋಬ್ಬರಿ ₹16.80 ಲಕ್ಷ ದೋಖಾ ಆಗಿದೆ.
ಶಿಕ್ಷಕ ನಾಗರಾಜ ಜಗತಾಪ ಅವರ ಖಾತೆಯಿಂದ ಮೇ 6ರಿಂದ 9ರ ಅವಧಿಯಲ್ಲಿ ಬರೋಬ್ಬರಿ ₹9 ಲಕ್ಷ ಗುಳುಂ ಆಗಿದೆ. ಶಿಕ್ಷಕ ತಮ್ಮ ಖಾತೆಗೆ ಯಾವುದೇ ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದಿರಲಿಲ್ಲ. ಆದರೂ ಸಹ ಅವರ ಖಾತೆಯಿಂದ ಖದೀಮರು ಬರೋಬ್ಬರಿ ₹9 ಲಕ್ಷ ದೋಚಿದ್ದಾರೆ. ಒಂದೇ ಸಾರಿ ಹಣ ಪಡೆಯದೇ ಲಕ್ಷ, ಐವತ್ತು ಸಾವಿರ ಹೀಗೆ ಹಂತ ಹಂತವಾಗಿ ಮೂರು ದಿನದಲ್ಲಿ ಹಣ ಲಪಟಾಯಿಸಿದ್ದಾರೆ.ಆಪರೇಷನ್‌ಗೆ ಇಟ್ಟ ಹಣ:
ಶಿಕ್ಷಕ ನಾಗರಾಜ ಅಪಘಾತವಾಗಿ ಅನಾರೋಗ್ಯ ಸ್ಥಿತಿಯಲ್ಲಿದ್ದು, ಸ್ಪೈನಲ್ ಕಾರ್ಡ್ ಆಪರೇಷನ್‌ಗೆ ತಮ್ಮ ಖಾತೆಯಲ್ಲಿ ಹಣ ಇಟ್ಟುಕೊಂಡಿದ್ದರು. ಸದ್ಯ ಶಿಕ್ಷಕ ನಾಗರಾಜ ಹಣ ಕಳೆದುಕೊಂಡು ಆಪರೇಷನ್ ಸಹ ಇಲ್ಲದೆ ನರಳಾಡುವಂತಾಗಿದೆ.₹1.32 ಲಕ್ಷ ದೋಖಾ:
ಮೇ 5ರಂದು ಶಿಕ್ಷಕ ಮಹೇಶ ಬಳಗೇರಿ ಅವರ ಖಾತೆಯಿಂದ ಖದೀಮರು ಬರೋಬ್ಬರಿ ₹1.30 ಲಕ್ಷವನ್ನು ಲಪಟಾಯಿಸಿದ್ದಾರೆ. ಮೂರು ಹಂತದಲ್ಲಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.4 ಲಕ್ಷ ವಂಚನೆ:
ಶಿಕ್ಷಕ ಚಂದ್ರಶೇಖರ ದೊಡ್ಮನಿ ಅವರ ಖಾತೆಯಿಂದ ₹ 4 ಲಕ್ಷ ವಂಚನೆ ಆಗಿದೆ. ಕುಟುಂಬದ ಅಡಚಣೆಗೆ ಇತ್ತೀಚೆಗೆ ಶಿಕ್ಷಕ ಚಂದ್ರಶೇಖರ ಸಾಲ ಪಡೆದಿದ್ದರು. ಹಣ ಕಳೆದುಕೊಂಡು ಅವರ ಕುಟುಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ.₹2.48 ಲಕ್ಷ ವಂಚನೆ:
ಕುಕನೂರು ಪಟ್ಟಣದ ಅಂಬಿಕಾ ಸ್ವೀಟ್ಸ್ ಬೇಕರಿಯ ಮಾಲೀಕ ರಮೇಶ ಸಿಂಗ್ ರಾಜಪುರೋಹಿತ್ ಖಾತೆಯಿಂದ ₹2.48 ಲಕ್ಷವನ್ನು ಖದೀಮರು ಎಗರಿಸಿದ್ದಾರೆ. ಮೇ 8ರಂದು ಮೂರು ನಿಮಿಷದಲ್ಲಿ ಮೂರು ಹಂತದಲ್ಲಿ ₹2.48 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ. ಮನೆ ಕಟ್ಟಲು ಸಾಲ ಮಾಡಿಕೊಂಡಿದ್ದ ಉದ್ಯಮಿಯ ಹಣ ಸದ್ಯ ಖದೀಮರ ಜೇಬು ಸೇರಿದೆ.ಕೆನರಾ ಬ್ಯಾಂಕ್ ಖಾತೆ:
ಆನ್ ಲೈನ್ ಮೋಸಕ್ಕೆ ಒಳಗಾಗಿರುವ ಈ ನಾಲ್ವರದು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಇವೆ. ಕೆನರಾ ಬ್ಯಾಂಕ್‌ನವರು ಹಣ ಜಮೆ ಆದ ಖಾತೆಗಳನ್ನು ಲಾಕ್ ಮಾಡಿದ್ದಾರೆ. ಅದು ಯಾರ ಖಾತೆ ಎಂದು ಶೀಘ್ರ ತನಿಖೆ ಕೈಗೊಂಡು ವಿಚಾರಣೆ ಮಾಡಿಸಿದರೆ, ಖದೀಮರ ಪತ್ತೆಗೆ ಅನುಕೂಲ ಆಗುತ್ತದೆ.ಸೈಬರ್ ಕ್ರೈಂಗೆ ದೂರು:
ಹಣ ವಂಚನೆ ಆದ ಬಗ್ಗೆ ಸೈಬರ್ ಕ್ರೈಂ ಹಾಗೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಖದೀಮರ ಪತ್ತೆ ಶೀಘ್ರ ಆದರೆ ಹಣ ಕಳೆದುಕೊಂಡವರಿಗೆ ಅನುಕೂಲ ಆಗುತ್ತದೆ. ಮರುಗುವ ಜೀವಗಳಿಗೆ ಖದೀಮರಿಂದ ಮರಳಿ ಹಣ ಕೊಡಿಸಿದರೆ ಮಾತ್ರ ನಿಟ್ಟುಸಿರು ಬಿಟ್ಟಂತಾಗುತ್ತದೆ.ಖಾತೆಯಲ್ಲಿದ್ದ ಹಣ ಏಕಾಏಕಿ ವರ್ಗಾವಣೆ ಆಗಿದೆ. ಸುರಕ್ಷಿತ ಎಂದು ಖಾತೆಯಲ್ಲಿ ಹಣ ಇಟ್ಟಿದ್ದೇವು. ಆದರೆ ಖದೀಮರು ದೋಚಿದ್ದಾರೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ದೂರು ಸಹ ದಾಖಲಿಸಿದ್ದೇವೆ. ಶೀಘ್ರ ನಮಗೆ ನಮ್ಮ ಹಣ ಸಿಗುವಂತೆ ಖದೀಮರ ಪತ್ತೆ ಮಾಡಿ ಕೊಟ್ಟರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಹಣ ಕಳೆದುಕೊಂಡ ನಾಗರಾಜ ಜಗತಾಪ, ಚಂದ್ರಶೇಖರ ದೊಡ್ಮನಿ, ಮಹೇಶ ಬಳಗೇರಿ,ರಮೇಶ ಸಿಂಗ್ ರಾಜಪುರೋಹಿತ್,
ಹಣ ಕಳೆದುಕೊಂಡವರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಬ್ಯಾಂಕ್‌ನಿಂದಲೂ ಸಹ ದೂರು ದಾಖಲಿಸಲಾಗಿದೆ. ಈಗಾಗಲೇ ಪೊಲೀಸರು ಸಹ ವಿಚಾರಣೆ ಕೈಗೊಂಡಿದ್ದಾರೆ. ಅದರ ಬಗ್ಗೆ ಬ್ಯಾಂಕಿನಿಂದ ಸಹ ವಿಚಾರಣೆ ಕಾರ್ಯ ಜರುಗುತ್ತಿದೆ ಎಂದು ಕೆನರಾ ಬ್ಯಾಂಕ್ ಮ್ಯಾನೇಜರ್ ಎ. ನದಾಫ್ ತಿಳಿಸಿದ್ದಾರೆ.