ಧುಮ್ಮಿಕ್ಕಿ ಹರಿಯುತ್ತಿರುವ ಚುಂಚನಕಟ್ಟೆ ಜಲಪಾತ

KannadaprabhaNewsNetwork |  
Published : Jul 20, 2024, 12:45 AM IST
72 | Kannada Prabha

ಸಾರಾಂಶ

ನದಿಯಲ್ಲಿ ಈಗ 50 ಸಾವಿರ ಕ್ಯುಸೆಕ್‌ ನೀರು ಹರಿಯುತ್ತಿದ್ದು, ಹಾಲ್ನೊರೆಯಂತೆ ಹರಿಯುತ್ತಿರುವ ಕಾವೇರಿ ಜಲಧಾರೆ ನಯನ ಮನೋಹರ ದೃಶ್ಯವನ್ನು ಸೃಷ್ಟಿ ಮಾಡಿದೆ.

ಕುಪ್ಪೆ ಮಹದೇವಸ್ವಾಮಿ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುಂಚನಕಟ್ಟೆ ಕಾವೇರಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೋಡುಗರು ಮತ್ತು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ನದಿಯಲ್ಲಿ ಈಗ 50 ಸಾವಿರ ಕ್ಯುಸೆಕ್‌ ನೀರು ಹರಿಯುತ್ತಿದ್ದು, ಹಾಲ್ನೊರೆಯಂತೆ ಹರಿಯುತ್ತಿರುವ ಕಾವೇರಿ ಜಲಧಾರೆ ನಯನ ಮನೋಹರ ದೃಶ್ಯವನ್ನು ಸೃಷ್ಟಿ ಮಾಡಿದೆ.

ಕಾವೇರಿ ನದಿಯ ತುಂಬಾ ನೀರು ಉಕ್ಕಿ ಹರಿಯುತ್ತಿರುವುದರಿಂದ ಚುಂಚನಕಟ್ಟೆ ಹೋಬಳಿಯ ಮಾಯಗೌನಹಳ್ಳಿ ಸಮೀಪದ ಸಕ್ಕರೆ ಗ್ರಾಮದ ಬಳಿ ಬಳ್ಳೂರು ಅಣೆಕಟ್ಟೆ ಮೇಲೆ ಹರಿಯುತ್ತಿರುವ ನೀರಿನ ದೃಶ್ಯ ವೈಭವ ಪ್ರಕೃತಿ ಪ್ರಿಯರ ಮನ ಸೆಳೆಯುತ್ತಿದೆ.

ಚುಂಚನಕಟ್ಟೆ ಕಾವೇರಿ ಜಲಪಾತದ ಜೊತೆಗೆ ಕೆ.ಆರ್. ನಗರ ಪಟ್ಟಣದ ಹೊರ ವಲಯದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯದ ಬಳಿ ಕಾವೇರಿ ನದಿಯ ಜಲರಾಶಿ ಸೊಬಗಿನ ಸಿರಿಯಾಗಿ ಅವಿರ್ಭವಿಸುತ್ತಿದ್ದು ಇದು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಮೈಸೂರು ಸೇರಿದಂತೆ ಕೊಡಗು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದಲೂ ಪ್ರವಾಸಿಗರು ಚುಂಚನಕಟ್ಟೆಗೆ ಭೇಟಿ ನೀಡಿ ಕಾವೇರಿ ಜಲಪಾತದ ಸೊಬಗನ್ನು ಸವಿದು ಜತೆಗೆ ಸೀತಾ ಸಮೇತ ಶ್ರೀ ರಾಮದೇವರ ದರ್ಶನ ಪಡೆಯುತ್ತಿದ್ದಾರೆ.

ಅತ್ಯುತ್ತಮ ಪ್ರವಾಸಿ ತಾಣ ಮಾಡಲು ಪ್ರಯತ್ನ

ಚುಂಚನಕಟ್ಟೆಯನ್ನು ಜಿಲ್ಲೆಯಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಮುಂದಿನ ತಿಂಗಳು ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿಯೇ ಜಿಲ್ಲಾಧಿಕಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅಲ್ಲಿನ ಅಗತ್ಯತೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದರೊಂದಿಗೆ ವಾರಾಂತ್ಯದ ಅನ್ನ ದಾಸೋಹ ಮತ್ತೆ ಆರಂಭ ಮಾಡಲಿದ್ದು, ದೇವಾಲಯದಲ್ಲಿಯೇ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಿಸುವುದಾಗಿ ಅವರು ತಿಳಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ