ಜಿಲ್ಲೆಯಲ್ಲಿ 16 ಮಂದಿ ತಾಯಿ, 196 ಶಿಶು ಮರಣ

KannadaprabhaNewsNetwork |  
Published : Dec 18, 2024, 12:46 AM IST
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ | Kannada Prabha

ಸಾರಾಂಶ

ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ಜಿಲ್ಲೆಯಲ್ಲಿ 2024 ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 19,583 ಹೆರಿಗೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 16ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿವೆ. ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉದಾಸೀನ ಮಾಡದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಸಂಭವಿಸಿದ ನಂತರ ಮರಣ ಪ್ರಮಾಣದ ಬಗ್ಗೆ ಚರ್ಚಿಸುವ ಬದಲು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಸಹಜ ಹೆರಿಗೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ಸಿ-ಸೆಕ್ಷನ್(ಸಿಸೇ಼ರಿಯನ್) ಹೆರಿಗೆ ಮಾಡಬೇಕು. ಹೆರಿಗೆ ಮಾಡುವ ವೈದ್ಯರು ಹಾಗೂ ಹೆರಿಗೆಗೆ ಸಹಕರಿಸುವ ಶುಶ್ರೂಷಕರಿಗೆ ನೈಪುಣ್ಯತಾ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.ವೈದ್ಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರು ಮಾನವೀಯತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಇನ್ನಾವುದೇ ಕ್ಷೇತ್ರದಲ್ಲಿ ಇಂತಹ ಅಮೂಲ್ಯ ಸೇವೆಗೆ ಅವಕಾಶವಿರುವುದಿಲ್ಲ. ವೈದ್ಯರು ರೋಗಿಗಳ ಸೇವೆಗಾಗಿಯೇ ಸಮಯವನ್ನು ಮುಡುಪಾಗಿಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ಮರಣ ಹೊಂದಿದ 16 ತಾಯಂದಿರ ಪೈಕಿ ಮನೆಯಲ್ಲಿ 1, ಖಾಸಗಿ ಆಸ್ಪತ್ರೆಯಲ್ಲಿ 8, ಸರ್ಕಾರಿ ಆಸ್ಪತ್ರೆಯಲ್ಲಿ 3 ಹಾಗೂ ಮಾರ್ಗ ಮಧ್ಯೆ 4 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಆಸ್ಪತ್ರೆಯಲ್ಲಿ 127 ಹಾಗೂ ಮನೆಯಲ್ಲಿ 69 ಸೇರಿ ಒಟ್ಟು 196 ಶಿಶುಗಳ ಮರಣ ಸಂಭವಿಸಿರುವ ಬಗ್ಗೆ ವರದಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಸ್ಗರ್ ಬೇಗ್ ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಏಪ್ರಿಲ್ ಮಾಹೆಯಿಂದ ನವೆಂಬರ್‌ವರೆಗೆ ಹೃದಯ ಸಂಬಂಧಿತ, ಅಧಿಕ ರಕ್ತದೊತ್ತಡ, ಅಧಿಕ ರಕ್ತಸ್ರಾವ, ಉಸಿರಾಟದ ತೊಂದರೆ, ಅವಧಿ ಪೂರ್ವ ಹೆರಿಗೆ, ಡಯೇರಿಯಾ, ಆಸ್ಫಿಕ್ಸಿಯಾ, ಕಡಿಮೆ ತೂಕದ ಜನನ, ನಿಮೋನಿಯಾ, ಸೆಪ್ಸಿಸ್ ಸೇರಿದಂತೆ ಮತ್ತಿತರ ರೋಗಗಳಿಂದ ತಾಯಿ ಮತ್ತು ಶಿಶು ಮರಣಗಳು ಸಂಭವಿಸಿವೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀರೋಗ ತಜ್ಞರು, ಆರ್‌ಸಿಹೆಚ್ ಅಧಿಕಾರಿ ಡಾ. ಸಿ.ಆರ್. ಮೋಹನ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ, ಡಾ. ಮೋಹನ್ ದಾಸ್, ಡಾ. ಕೇಶವ್ ರಾಜ್, ವಿವಿಧ ತಾಲೂಕುಗಳ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌