ತುಮಕೂರಿನಲ್ಲಿ ಮೈನಡುಗಿಸುವ ಚಳಿ

KannadaprabhaNewsNetwork |  
Published : Dec 18, 2024, 12:46 AM IST

ಸಾರಾಂಶ

ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ನಡಗುತ್ತದೆ ಎನ್ನುವಂತೆ ಬೆಳಿಗ್ಗೆಯೇ ಕಲ್ಪತರುನಾಡಲ್ಲಿ ದಟ್ಟ ಮಂಜು ಆವರಿಸಿದ್ದು, ಮೈ ನಡುಗುವ ಚಳಿ ಜೊತೆಗೆ ವಾಹನ ಸವಾರರು ಸುಗಮವಾಗಿ ಸಂಚರಿಸಲು ಪರದಾಡುವಂತಾಯಿತು. ಕಳೆದ ಎರಡು-ಮೂರು ದಿನಗಳಿಂದ ಚಳಿ ದುಪ್ಪಟವಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ದಟ್ಟ ಮಂಜು ಆವರಿಸಿತ್ತು.

ಕನ್ನಡಪ್ರಭ ವಾರ್ತೆ, ತುಮಕೂರು

ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ನಡಗುತ್ತದೆ ಎನ್ನುವಂತೆ ಬೆಳಿಗ್ಗೆಯೇ ಕಲ್ಪತರುನಾಡಲ್ಲಿ ದಟ್ಟ ಮಂಜು ಆವರಿಸಿದ್ದು, ಮೈ ನಡುಗುವ ಚಳಿ ಜೊತೆಗೆ ವಾಹನ ಸವಾರರು ಸುಗಮವಾಗಿ ಸಂಚರಿಸಲು ಪರದಾಡುವಂತಾಯಿತು. ಕಳೆದ ಎರಡು-ಮೂರು ದಿನಗಳಿಂದ ಚಳಿ ದುಪ್ಪಟವಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ದಟ್ಟ ಮಂಜು ಆವರಿಸಿತ್ತು.

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಕಾಣದಷ್ಟರ ಮಟ್ಟಿಗೆ ಮಂಜು ದಟ್ಟವಾಗಿ ಆವೃತವಾಗಿತ್ತು. ಇನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಬೆಳಿಗ್ಗೆ 8.45 ಗಂಟೆಯಾದರೂ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಚಾಲಕರಿಗೆ ಕಾಣದಂತಾಗಿತ್ತು. ಇದರಿಂದಾಗಿ ವಾಹನಗಳ ಸುಗಮವಾಗಿ ಚಲಿಸಲಾಗದೆ ಚಾಲಕರು ಪರದಾಡುವಂತಾಗಿತ್ತು.

ಬಸ್, ಲಾರಿ, ಕಾರುಗಳು ಹೆಡ್‌ಲೈಟ್ ಹಾಕಿಕೊಂಡು ಚಲಿಸಿದರೂ ಸಹ ರಸ್ತೆಯಲ್ಲಿ ಬೆಳಕು ಕಾಣದಂತಾಗಿತ್ತು.

ಬಸ್ ಚಾಲಕರನ್ನು ಹೊರತುಪಡಿಸಿದರೆ ಸರಕು ಸಾಗಣೆ, ಲಾರಿ ಚಾಲಕರು ಮೈನಡುಗಿಸುವ ಚಳಿ, ದಟ್ಟ ಮಂಜಿನಿಂದಾಗಿ ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಟೀ ಅಂಗಡಿಗಳ ಬಳಿ ಬೆಂಕಿ ಹಾಕಿಕೊಂಡು ಚಳಿಯಿಂದ ಪಾರಾಗಲು ಮೈ ಬಿಸಿ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು.

ಬೆಳಿಗ್ಗೆ 8.45 ಗಂಟೆಯಾದರೂ ದಟ್ಟ ಮಂಜು ಇದ್ದುದರಿಂದ ಎಂದಿನಂತೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮಾಮೂಲಿನಂತೆ ಎದ್ದು ರೆಡಿಯಾಗಿ 7 ಗಂಟೆಯಿಂದಲೇ ದಟ್ಟ ಮಂಜು ಹಾಗೂ ಮೈನಡುಗಿಸುವ ಚಳಿ ನಡುವೆಯೂ ಸ್ವೆಟರ್, ಜರ್ಕಿನ್ ಧರಿಸಿ ಶಾಲಾ-ಕಾಲೇಜುಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ 8.50 ರ ನಂತರ ಸೂರ್ಯನ ಕಿರಣಗಳು ಪ್ರಜ್ವಲಿಸಿದಂತೆ ದಟ್ಟವಾಗಿ ಆವರಿಸಿದ್ದ ಮಂಜು ನಿಧಾನವಾಗಿ ಕಡಿಮೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ