ಕನ್ನಡಪ್ರಭ ವಾರ್ತೆ ಬೆಳಗಾವಿ
ಡಿ.26ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಿಂದ ದೇಶದ ರಾಜಕೀಯ, ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ಸಿಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದರು.ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾತ್ಮಾ ಗಾಂಧಿಜಿ ಅವರು ಕೇವಲ ಒಂದು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. 1924ರ ಡಿ.26ರಂದು ಬೆಳಗಾವಿ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದರು. ಈಗ ಅದಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಈ ಕ್ಷಣವನ್ನು ಸಂಭ್ರಮಿಸಲು ಪ್ರತಿ ಕಾಂಗ್ರೆಸಿಗನಿಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.ಇಂದು ದೇಶದ ಪರಿಸ್ಥಿತಿ ನಮಗೆಲ್ಲ ಗೊತ್ತಿದೆ. ಮಹಾತ್ಮಾ ಗಾಂಧಿ ಅಹಿಂಸೆ ಬಗ್ಗೆ ಪ್ರತಿಪಾದನೆ ಮಾಡಿದರು. ಬ್ರಿಟೀಷರ ವಿರುದ್ಧ ಅಹಿಂಸೆ ಮಾರ್ಗದಲ್ಲಿ ಹೋರಾಡಿ ಪ್ರೀತಿ, ಸಮಾನತೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇದೆಲ್ಲವೂ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಾಶವಾಗುತ್ತಿವೆ. ಈಗ ದೇಶದಲ್ಲಿ ಸಮಾನತೆ ಇಲ್ಲ. ಶ್ರೀಮಂತರು ಶ್ರೀಮಂತರಾಗಿ, ಬಡವರು ಕಡು ಬಡವರಾಗುತ್ತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಹಿತಾಸಕ್ತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದರು.ಸಾರ್ವಜನಿಕ ಉದ್ದಿಮೆಗಳನ್ನು ಮಾರಲಾಗುತ್ತಿದೆ. ದೇಶದ ಎಲ್ಲಾ ಆಸ್ತಿಗಳು ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿವೆ. ಹೀಗಾಗಿ ಸಮಾನತೆ ಎಂಬುದೇ ದೇಶದಲ್ಲಿ ಇಲ್ಲವಾಗಿದೆ ಎಂದು ದೂರಿದ ಅವರು, ಬಿಜೆಪಿ ದೇಶದೆಲ್ಲೆಡೆ ದ್ವೇಷದ ಮಾರುಕಟ್ಟೆ ತೆರೆದಿದೆ. ನಿತ್ಯ ಧರ್ಮದ ಹೆಸರಲ್ಲಿ ದ್ವೇಷ ಬಿತ್ತುತ್ತಿದೆ. ಅದೊಂದೆ ಅವರ ಅಜೆಂಡಾ. ಈಗ ಅವರು ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಹೈಜಾಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಸಭೆ ದೇಶದ ರಾಜಕೀಯ ಹಾಗೂ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬೆಳಗಾವಿಯಲ್ಲಿ ನಾವು ದೊಡ್ಡ ನಿರ್ಧಾರ ಮಾಡಬೇಕಿದೆ. ನಾವು ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಡುತ್ತಿದ್ದು, ಈ ಸಭೆ ಬಹಳ ಪ್ರಮುಖವಾಗಿದೆ. ಕೆಪಿಸಿಸಿ ಈ ಸಭೆಯನ್ನು ಯಶಸ್ವಿಗೊಳಿಸುತ್ತಿದ್ದು, 26ರಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಶಾಶ್ವತ ಆಹ್ವಾನಿತರು, ವಿಶೇಷ ಆಹ್ವಾನಿತರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಸಂಸದೀಯ ಸಮಿತಿ ಸದಸ್ಯರು, ಪಕ್ಷದ ಪ್ರಮುಖ ಘಟಕಗಳ ಅಧ್ಯಕ್ಷರು ಸಭೆ ಮಾಡಲಿದ್ದಾರೆ ಎಂದು ವಿವರಿಸಿದರು.
ಮರುದಿನ ಬೃಹತ್ ಸಮಾವೇಶ ನಡೆಯಲಿದ್ದು, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಇದೊಂದು ಮಹತ್ತರ ಸಭೆಯಾಗಲಿದೆ. ಅದೇ ದಿನ ಅದೇ ಸಮಯದಲ್ಲಿ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದಲೂ ಈ ಕ್ಷಣವನ್ನು ಆಚರಿಸುವಂತೆ ಎಐಸಿಸಿಯಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಗಾಂಧಿ ಪ್ರತಿಮೆ ಅನಾವರಣ:ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೇ ವೇಳೆ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷರು ಹಾಗೂ ಸಭಾಪತಿಗಳು, ಸಂಸತ್ತಿನ ಎರಡೂ ಸದನಗಳ ವಿರೋಧ ಪಕ್ಷಗಳ ನಾಯಕರು ಸೇರಿ ಸುವರ್ಣಸೌಧದ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಿದ್ದಾರೆ ಎಂದರು.ಸಿಎಂ ಸಿದ್ದರಾಮಯ್ಯ ಮಾತನಾಡಿ, ಪಕ್ಷದಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೇರೆ ಪಕ್ಷದವರಿಗೆ ಆಹ್ವಾನ ಇರುವುದಿಲ್ಲ. ಆದರೆ ಸರ್ಕಾರದಿಂದ ಮಾಡಲಾಗುತ್ತಿರುವ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರಿಗೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಷಣಕ್ಕೆ ಶತಮಾನೋತ್ಸವದ ಸಂಭ್ರಮ ಕೇವಲ ಕರ್ನಾಟಕದ ಜನರಿಗೆ ಮಾತ್ರವಲ್ಲ, ಇಡೀ ದೇಶದ ಜನರಿಗೆ ಹೆಮ್ಮೆಯ ವಿಚಾರ. ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಪರಿವರ್ತನೆಗಾಗಿ ಬಹಳ ಮಹತ್ವದ್ದಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸೇರಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಬೆಳಗಾವಿ ಭೂಮಿಯಿಂದ ಬದಲಾವಣೆಯ ಹೊಸ ಸಂಕಲ್ಪ ಮಾಡಿ ಜನ ಕಲ್ಯಾಣದತ್ತ ಕಾಂಗ್ರೆಸ್ ಸಾಗಬೇಕಿದೆ. ಆಗ ಈಸ್ಟ್ ಇಂಡಿಯಾ ಕಂಪನಿ ಅವರು ದೇಶ ಆಳಿದರೆ, ಇಂದು ಮೋದಾನಿ ಕಂಪನಿ ಆಳುತ್ತಿದೆ. ಅವರು ಬಡವರು, ದಲಿತರು, ಶೋಷಿತ ವರ್ಗದವರ ಮೇಲೆ ಆಕ್ರಮಣ ಮಾಡಿದರು ಎಂದು ದೂರಿದರು.ಅದೇ ರೀತಿ ಮೋದಾನಿ ಕಂಪನಿಯವರು ಈ ವರ್ಗದವರ ಮೇಲೆ ಆಕ್ರಮಣ ಮಾಡುತ್ತಿದೆ. ಅದರ ಭಾಗವಾಗಿ ಒಂದು ದೇಶ ಒಂದು ಚುನಾವಣೆ. ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಾಗದೆ, ವಾಮಮಾರ್ಗದ ಮೂಲಕ ಪಂಡಿತ್ ನೆಹರೂ, ಸರ್ದಾರ್ ವಲ್ಲಭ ಬಾಯಿ ಪಟೇಲ್, ಅಂಬೇಡ್ಕರ್, ಮೌಲಾನಾ ಆಜಾದ್, ಡಾ.ರಾಜೇಂದ್ರ ಪ್ರಸಾದ್ ಅವರು ರಚಿಸಿರುವ ಸಂವಿಧಾನದ ಮೇಲೆ ಆಕ್ರಮಣ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೆ ವೇಳೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆಯಾಗಲಿರುವ ಮುಖ್ಯ ವಿಚಾರಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ವೇಣುಗೋಪಾಲ್, ಸಧ್ಯ ದೇಶದಲ್ಲಿರುವ ರಾಜಕೀಯ ಪರಿಸ್ಥಿತಿ ಅವಲೋಕಿಸಿ, ಬಿಜೆಪಿ ಸರ್ಕಾರ ತನ್ನ ಸಿದ್ಧಾಂತಗಳನ್ನು ಕಾನೂನು ಮೂಲಕ ಹೇರುತ್ತಿರುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಚರ್ಚಿಸಲಾಗುವುದು ಎಂದರು. ಒಂದು ದೇಶ ಒಂದು ಚುನಾವಣೆ ಕುರಿತ ಪ್ರಶ್ನೆಗೆ, ಒಂದು ದೇಶ ಒಂದು ಚುನಾವಣೆ ಎಂಬುದು ಚುನಾವಣೆಗಳಿಲ್ಲದ ಒಂದು ದೇಶವಾಗಿ ಮಾರ್ಪಾಡು ಮಾಡುವ ಹುನ್ನಾರ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಪ್ರಮುಖ ಅಜೆಂಡಾ ಇದೇ ಆಗಿದೆ. ಅವರಿಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೇಲೆ ಆಸಕ್ತಿ ಇಲ್ಲ. ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡಲು ಇಂತಹ ಪರಿಕಲ್ಪನೆ ತರುತ್ತಿದ್ದಾರೆ. ಕರ್ನಾಟಕ, ಕೇರಳ, ಮಣಿಪುರ, ಜಮ್ಮು ಕಾಶ್ಮೀರ ಸೇರಿದಂತೆ ಒಂದೊಂದು ರಾಜ್ಯ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ವಿವಿಧತೆಯಲ್ಲಿ ಏಕತೆಯೇ ಈ ದೇಶದ ಶಕ್ತಿ. ಆದರೆ ಬಿಜೆಪಿಯವರು ಪ್ರಜಾಪ್ರಭುತ್ವ, ವೈವಿಧ್ಯತೆ ಮೇಲೆ ನಂಬಿಕೆ ಇಲ್ಲ. ಈ ಪ್ರಕ್ರಿಯೆ ವಾಸ್ತವವಾಗಿ ಜಾರಿ ಮಾಡಲು ಸಾಧ್ಯವಿಲ್ಲ. ಆದರೂ ಇದನ್ನು ಬಿಜೆಪಿ ಸಂಸತ್ತಿನಲ್ಲಿ ಅನುಮೋದನೆ ಮಾಡಲಿದೆ ಎಂಬುದು ನಮಗೆ ಗೊತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಜಯ್ ಮಾಕೇನ್, ಸಚಿವರಾದ ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರ ಮುಖಂಡರು ಹಾಜರಿದ್ದರು.