16 ರಿಂದ 20 - ಬನ್ನಂಜೆ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ವೈಭವ

KannadaprabhaNewsNetwork |  
Published : Apr 14, 2026, 03:00 AM IST
13ಬನ್ನಂಜೆ | Kannada Prabha

ಸಾರಾಂಶ

ನಗರದ ಬನ್ನಂಜೆಯಲ್ಲಿರುವ ಇತಿಹಾಸ - ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಏ, 16ರಿಂದ 20ರವರೆಗೆ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬನ್ನಂಜೆ ಮಾಧವ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ: ನಗರದ ಬನ್ನಂಜೆಯಲ್ಲಿರುವ ಇತಿಹಾಸ - ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಏ, 16ರಿಂದ 20ರವರೆಗೆ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬನ್ನಂಜೆ ಮಾಧವ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

8 - 9ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದಲ್ಲಿ 2013ರಲ್ಲಿ ದೇವರ ಪುನಃಪ್ರತಿಷ್ಠೆ - ಬ್ರಹ್ಮಕಲಶೋತ್ಸವವು ನಡೆದಿತ್ತು, ಸಂಪ್ರದಾಯದಂತೆ 12 ವರ್ಷಗಳ ನಂತರ ಇದೀಗ 2026ರಲ್ಲಿ ಮತ್ತೇ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ನಡೆಸಲಾಗುತ್ತಿದೆ ಎಂದರು. ಏ. 16ರಂದು ತೋರಣಮುಹೂರ್ತದೊಂದಿಗೆ ಆರಂಭವಾಗಿ ನಿತ್ಯವೂ ವೈದಿಕರಿಂದ ವಿವಿಧ ಧಾರ್ಮಿಕ ಹೋಮಹವನಾದಿ ಪೂಜೆಗಳು ನಡೆಯಲಿವೆ. 20ರಂದು ಬೆಳಿಗ್ಗೆ 9.15ರ ವೃಷಭ ಲಗ್ನ ಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪರಿಕಲಶ ಅಭಿಷೇಕ, ಬ್ರಹ್ಮಕಲಶೋತ್ಸವ, ಕಲಾನ್ಯಾಸ, ಮಹಾಪೂಜೆ, ಪಲ್ಲಪೂಜೆಗಳು ನಡೆಯಲಿವೆ ಎಂದವರು ವಿವರಗಳನ್ನು ನೀಡಿದರು.

15ರಂದು ಹೊರೆಕಾಣಿಕೆ: ಈ ಪ್ರಯುಕ್ತ ಏ. 15ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜೋಡುಕಟ್ಟೆಯಿಂದ ನಾಡೋಜ ಜಿ. ಶಂಕರ್ ನೇತೃತ್ವದಲ್ಲಿ 100 ವಾಹನ ಹಾಗೂ ಇತರ ಭಕ್ತರಿಂದ 200ಕ್ಕೂ ಹೆಚ್ಚು ವಾಹನಗಳಲ್ಲಿ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಇದರಲ್ಲಿ ಬಂಟ್ವಾಳದ ಶ್ರೀ ಶಾರದಾ ಆರ್ಟ್ಸ್‌ನಿಂದ ವೈವಿಧ್ಯಮಯ ಕಲಾತಂಡಗಳ‍ು, ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಸಾವಿರಾರು ಮಂದಿ ಭಕ್ತಾಭಿಮಾನಿಗಳು ಮೆರವಣಿಗೆಯಲ್ಲಿ ಹೊರೆಕಾಣಿಕೆಗಳನ್ನು ಶ್ರೀ ದೇವಳಕ್ಕೆ ತಂದೊಪ್ಪಿಸಲಿದ್ದಾರೆ. ಸಾಂಸ್ಕೃತಿಕ ವೈಭವ: ಏ.16ರಂದು ಶಿವಪ್ರೇರಣ - ಸಹಸ್ರ ಕಂಠ ಗಾಯನ ಮತ್ತು ರಾಘು ಮಾಸ್ಚ್ರು ತುಳು ನಾಟಕ, 17ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನೃತ್ಯೋಂ - 2026 ಹಾಗೂ ಶಿವಧೂತ ಗುಳಿಗೆ ನಾಟಕ, 18ರಂದು ಶಿವಪ್ರೇರಣಾ ಚಿತ್ರಕಲಾ ಸ್ಪರ್ಧೆ ಮತ್ತು ಶಿವನಾದಾರ್ಪಣಂ ಸ್ಯಾಕ್ಸೋಫೋನ್ ನಾದನ ಮತ್ತು ನೃತ್ಯ ವೈಭವ, 19ರಂದು ಮದರಂಗೋತ್ಸವ ಮಹಂದಿ - ರಂಗೋಲಿ ಸ್ಪರ್ಧೆ ಮತ್ತು ವೀಣನಾದೋತ್ಸವ ಮತ್ತು ನವೋದಯ ಸಂಘದಿಂದ ಜನಪದ ವೈಭವ, 20ರಂದು ಭಕ್ತಿ ರಸಮಂಜರಿ, ಭಕ್ತಿ ಸಂಗಿತ ಹಾಗೂ ಶಿವ ಸಂಕಲ್ಪ ಯಕ್ಷಗಾನ ಬಯಲಾಟಗಳು ನಡೆಯಲಿವೆ.

ನಿತ್ಯ ಅನ್ನಸಂತರ್ಪಣೆ: ಪ್ರತಿನಿತ್ಯ ದೇವಳಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಗುತ್ತದೆ, ಏ. 15ರಿಂದ 19ರವರೆಗೆ 5000 ಮಂದಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗುತ್ತದೆ. 20ರಂದು ಬ್ರಹ್ಮಕಲಶೋತ್ಸವದಂದು 35,000ಕ್ಕೂಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು ಅಷ್ಟೂ ಮಂದಿಗೆ ಮಧ್ಯಾಹ್ನ ಅನ್ನಪ್ರಸಾದದ ವ್ಯವಸ್ಥೆ ಇದೆ ಎದು ಅಧ್ಯಕ್ಷ ಮಾಧವ ಪೂಜಾರಿ ಹೇಳಿದರು. ಪಾರ್ಕಿಂಗ್‌ಗಾಗಿ ಭೂದಾನ ಯೋಜನೆ: ವ್ಯವಸ್ಥಿತ ಮತ್ತು ಶಾಶ್ವತ ಪಾರ್ಕಿಂಗ್ ಗಾಗಿ ದೇವಳದ ಮುಂಭಾಗದಲ್ಲಿ 36 ಸೆಂಟ್ಸ್ ಭೂಮಿಯನ್ನು ಖರೀದಿಸಲು ಈಗಾಗಲೇ 50 ಲಕ್ಷ ರು.ಗಳನ್ನು ಮುಂಗಡ ನೀಡಲಾಗಿದೆ. ಇನ್ನೂ 1.05 ಕೋಟಿ ರು. ನೀಡಬೇಕಾಗಿದೆ. ಅದಕ್ಕಾಗಿ ಭಕ್ತರ ಸಹಕಾರದ ಅವಶ್ಯಕತೆಯಿದ್ದು, ದೇವಳದಲ್ಲಿ ಕೂಪನ್ ವ್ಯವಸ್ಥೆ ಮಾಡಲಾಗಿದೆ. 1 ಸಾವಿರದಿಂದ 5 ಸಾವಿರದ ಕೂಪನ್ ವ್ಯವಸ್ಥೆ ಇದೆ, ಭಕ್ತರು ಈ ಕೂಪನ್ ಪಡೆದು ಅದರ ಮೊತ್ತವನ್ನು ದೇವಳಕ್ಕೆ ಪಾವತಿಸಬೇಕು ಎಂದರು. ಜೊತೆಗೆ 100 ರು.ನ ನೀಡಿ ಕಾಣಿಕೆ ಡಬ್ಬಿ ಪಡೆದು, ಅದರಲ್ಲಿ ಪ್ರತಿನಿತ್ಯ ಹಣ ಹಾಕಿ 1 ವರ್ಷದ ನಂತರ ಅದನ್ನು ದೇವಳಕ್ಕೆ ಹಿಂದಕ್ಕೆ ನೀಡಬೇಕು ಎಂದವರು ಭಕ್ತರಲ್ಲಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ, ಪ್ರಧಾನ ತಂತ್ರಿಗಳಾದ ಶಶಿಕಾಂತ್ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ್ ಶೆಟ್ಟಿ, ಶೇಖರ್ ಶೆಟ್ಟಿ, ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು. ಶೆಟ್ಟಿ, ಶಮಿತಾ ಎಸ್. ಭಂಡಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು