ಸಣ್ಣ ನೀರಾವರಿ ಇಲಾಖೆಯಲ್ಲಿ 17 ಕೋಟಿ ರುಪಾಯಿ ಭ್ರಷ್ಟಾಚಾರ

KannadaprabhaNewsNetwork |  
Published : Oct 14, 2023, 01:00 AM IST
ಫೋಟುಃ-13ಜಿಎನ್ಜಿ3-  ಗಂಗಾವತಿ ತಾಲೂಕ ಪಂಚಾಯಿತಿ ಮಂಥನಸಭಾಂಗಣದಲ್ಲಿ  ಶಾಸಕ ಜನಾರ್ಧನ ರೆಡ್ಡಿಅದ್ಯಕ್ಷತೆಯಲ್ಲಿ  ಕೆಡಿಪಿ ಸಭೆ ಜರುಗಿತು.  | Kannada Prabha

ಸಾರಾಂಶ

ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಕಟ್ಟಡಗಳು ತುಂಬ ಹಳೆಯದಾಗಿವೆ. 100x80 ಅಳತೆಯ ನಿವೇಶನ ಕಲ್ಪಿಸಬೇಕಿದೆ. ಈ ಬಾರಿ ಮಳೆ ಅಭಾವದ ಹಿನ್ನೆಲೆಯಲ್ಲಿ ಒಣ ಬೇಸಾಯ ಭೂಮಿಯಲ್ಲಿ ಬಿತ್ತಿದ ಜೋಳ, ಸಜ್ಜೆ, ತೊಗರಿ ಬೆಳೆ ನಷ್ಟಕ್ಕೆ ತುತ್ತಾಗಿವೆ. 2024ನೇ ಸಾಲಿನ ಹಿಂಗಾರು, ಮುಂಗಾರು ಬೆಳೆಗೆ 100 ಕ್ವಿಂಟಲ್ ಕಡಲೆ, 18 ಕ್ವಿಂಟಲ್ ಜೊಳ, 200 ಕ್ವಿಂಟಲ್ ಶೇಂಗಾ ದಾಸ್ತಾನು ಮಾಡಲಾಗಿದೆ. ರಸಗೊಬ್ಬರ ಕೊರತೆ ಇಲ್ಲ.

ಗಂಗಾವತಿ: ಸಣ್ಣ ನೀರಾವರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಲು ತಾಪಂ ಇಒ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಲು ಶಾಸಕ ಗಾಲಿ ಜನಾರ್ದನ ರೆಡ್ಡಿ ಸೂಚಿಸಿದ್ದಾರೆ.ತಾಪಂ ಮಂಥನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸೆಲ್ವಕುಮಾರ ನೀರಾವರಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ₹17 ಕೋಟಿ ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತನಿಖೆಗೆ ಸೂಚಿಸಿದರು.

ಯಾವ ಯಾವ ಕಾಮಗಾರಿಗಳಿಗೆ ಹಣ ಖರ್ಚು ಮಾಡಿದ ಬಗ್ಗೆ ಅಧಿಕಾರಿಗಳು ದಾಖಲೆಗಳ ಮೂಲಕ ವಿವರ ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗುತ್ತದೆ ಎಂದು ಶಾಸಕರು ಹೇಳಿದರು.ಗಂಗಾವತಿ ಕ್ಷೇತ್ರದ ವ್ಯಾಪ್ತಿಯ ಇರಕಲ್ ಗಡ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಈ ವೇಳೆ ಜೆಸ್ಕಾಂ ಅಧಿಕಾರಿಗಳು ಆ ಭಾಗದಲ್ಲಿ ಅನಧಿಕೃತ ವಿದ್ಯುತ್ ಕ ನೆಕ್ಷನ್ ಹೆಚ್ಚಿವೆ ಎಂದರು. ಆಗ ಶಾಸಕರು, ಅವುಗಳನ್ನು ಅಧಿಕೃತ ಮಾಡಿಕೊಡುವಂತೆ ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಕಟ್ಟಡಗಳು ತುಂಬ ಹಳೆಯದಾಗಿವೆ. 100x80 ಅಳತೆಯ ನಿವೇಶನ ಕಲ್ಪಿಸಬೇಕಿದೆ. ಈ ಬಾರಿ ಮಳೆ ಅಭಾವದ ಹಿನ್ನೆಲೆಯಲ್ಲಿ ಒಣ ಬೇಸಾಯ ಭೂಮಿಯಲ್ಲಿ ಬಿತ್ತಿದ ಜೋಳ, ಸಜ್ಜೆ, ತೊಗರಿ ಬೆಳೆ ನಷ್ಟಕ್ಕೆ ತುತ್ತಾಗಿವೆ. 2024ನೇ ಸಾಲಿನ ಹಿಂಗಾರು, ಮುಂಗಾರು ಬೆಳೆಗೆ 100 ಕ್ವಿಂಟಲ್ ಕಡಲೆ, 18 ಕ್ವಿಂಟಲ್ ಜೊಳ, 200 ಕ್ವಿಂಟಲ್ ಶೇಂಗಾ ದಾಸ್ತಾನು ಮಾಡಲಾಗಿದೆ. ರಸಗೊಬ್ಬರ ಕೊರತೆ ಇಲ್ಲ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಗೌರಿಶಂಕರ ಮಾತನಾಡಿ, ತಾಲೂಕಿನ ಪ್ರಾಥಮಿಕ ಆರೋಗ್ಯ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಲ್ಯಾಬ್ ಟೆಕ್ನಿಶಿಯನ್, ಗ್ರೂಪ್-ಡಿ ಸಿಬ್ಬಂದಿ ಕೊರತೆಯಿದೆ ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ರೋಹಿಣಿ ಕೊಟಗಾರ್ ಮಾತನಾಡಿ, ತಾಲೂಕಿನಲ್ಲಿ 336 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 174 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 126 ಕಟ್ಟಡಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸ್ವಂತ ನಿವೇಶನ ಕಲ್ಪಿಸಬೇಕು. ಬಹುತೇಕ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲ ಎಂದರು.

ಪಶುಸಂಗೋಪನೆ ಇಲಾಖೆ ಅಧಿಕಾರಿ ಡಾ.ಮಹೇಶ ಕುಮಾರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಶ್ರೀನಿವಾಸ ನಾಯಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ಪ್ರಗತಿ ಕುರಿತು ಮಾಹಿತಿ ನೀಡಿದರು.

ತಾಪಂ ಆಡಳಿತಾಧಿಕಾರಿಗಳು ಹಾಗೂ ಜಿಪಂ ಯೋಜನಾ ನಿರ್ದೇಶಕ ಕೃಷ್ಞಮೂರ್ತಿ, ಗಂಗಾವತಿ ತಹಸೀಲ್ದಾರ ಮಂಜುನಾಥ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲೆ, ತಾಪಂ ಇಒಗಳಾದ ಲಕ್ಷ್ಮೀದೇವಿ, ದುಂಡಪ್ಪ ತುರಾದಿ, ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ