ಕನ್ನಡಪ್ರಭ ವಾರ್ತೆ ಕಾಗವಾಡ
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಮತದಾರರ ಋಣ ತೀರಿಸಲು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡುತ್ತಿರುವೆ ಹೊರತು ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಅಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.ಗುಂಡೇವಾಡಿ ಗ್ರಾಮದಲ್ಲಿ ಕೆರೆ ತುಂಬುವ ಯೋಜನೆ ಅನುಷ್ಠಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಉತ್ತರ ಭಾಗದ ಗ್ರಾಮಗಳಿಗೆ ಕುಡಿಯಲೂ ಕೂಡ ನೀರು ಕೊಡಲು ಸಾಧ್ಯವಾಗಿರಲ್ಲ. ಈಗ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡ ಗ್ರಾಮಗಳ 11 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ₹176.30 ಕೋಟಿ ಅನುದಾನದಲ್ಲಿ ಕೆರೆ ತುಂಬಿಸುವ ಯೋಜನೆಗೆ ಮಾರ್ಚ್ 1ರಂದು ಬೆಳಗ್ಗೆ 10.00ಕ್ಕೆ ಗುಂಡೇವಾಡಿ ಕಾಡ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಲಾಗುವುದು. ಈ ಭಾಗದ ರೈತರು ಕೆರೆ ತುಂಬುವ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು. ಕೆರೆ ತುಂಬುವ ಯೋಜನೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಕಾಗವಾಡ ಮತಕ್ಷೇತ್ರದ ಅನಂತಪುರ ಗ್ರಾಮದ 2, ಗುಂಡೇವಾಡಿ 2, ಪಾರ್ಥನಹಳ್ಳಿ 2, ಚಮಕೇರಿ 1, ಬೇಡರಹಟ್ಟಿ 1, ಬಳ್ಳಿಗೇರಿ 1, ಮಲಾಬಾದ 1, ಬೆವನೂರ 1 ಕೆರೆ ಈ ಯೋಜನೆಯಡಿ ತುಂಬಿಸಲಾಗುವುದು ಎಂದರು.
ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಡಿ ಮಾತನಾಡಿ, ಕೆರೆ ತುಂಬುವ ಯೋಜನೆಗೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಹತ್ತಿರದ ಕೃಷ್ಣಾ ನದಿಯ ಎಡದಂಡೆಯಿಂದ 0.21 ಟಿಎಂಸಿ ನೀರನ್ನು ಎತ್ತಿ 11 ಕೆರೆ ತುಂಬಿಸಲಾಗುವುದು. ಈ ಯೋಜನೆ ಪೂರ್ಣಗೊಳ್ಳಲು ರೈತರ ಸಹಕಾರ ಅತ್ಯಗತ್ಯವಾಗಿದೆ. ಸಭೆಯಲ್ಲಿ ರೈತರು ತಮ್ಮ ಅಭಿಪ್ರಾಯ ಹೇಳಬೇಕು ಜೊತೆಗೆ ಯೋಜನೆಗೆ ಸಹಕಾರ ನೀಡಬೇಕು ಎಂದರು. ಎಲ್ಲ 11 ಕೆರೆಗಳಿಗೂ ನೇರವಾಗಿ ಪೈಪ್‌ಲೈನ್ ಮೂಲಕ ನೀರು ಹರಿಸಿದಲ್ಲಿ ಮಾತ್ರ ಯಾವುದೇ ಅಡತಡೆ ಇಲ್ಲದೆ ಕೆರೆಗಳಿಗೆ ನೀರು ತುಂಬಿಸಬಹುದು ಎಂದು ಡಾ.ಸಿ.ಎ.ಸಂಕ್ರಟ್ಟಿ ಸಲಹೆ ನೀಡಿದರು.ಸಭೆಯಲ್ಲಿ ಗುತ್ತಿಗೆದಾರ ಅಶೋಕ ಕಪ್ಪಲಗುದ್ದಿ, ಅಕ್ಷಯ ಕಪ್ಪಲಗುದ್ದಿ, ಅಧಿಕಾರಿ ಪ್ರಶಾಂತ ಪೊತದಾರ, ಬಸವರಾಜ ಗಲಗಲಿ, ಮುಖಂಡರಾದ ಚಂದ್ರಕಾಂತ ಇಮ್ಮಡಿ, ಸುರೇಶ ಮೆಂಡಿಗೇರಿ, ನಾಗಪ್ಪ ಜತ್ತಿ ಮಾತನಾಡಿದರು. ಸಿದರಾಯ ತೇಲಿ, ಪ್ರಕಾಶ ಡೊಳ್ಳಿ, ಐ.ಜಿ.ಬಿರಾದಾರ, ರಫೀಕ ಪಟೇಲ, ನಾಗಪ್ಪ ಜತ್ತಿ, ಗುರಪ್ಪ ಜತ್ತಿ, ಶಿವಾನಂದ ಗೊಲಭಾವಿ, ಗುಳಪ್ಪ ಜತ್ತಿ, ಎಸ್.ಎಸ್.ಜಾಬಗೌಡರ, ಅಸ್ಫಕ ಘಟನಟ್ಟಿ ಸೇರಿ ಇತರರಿದ್ದರು.
ಅನಂತಪೂರ ಭಾಗದ 11 ಕೆರೆಗಳಿಗೆ ನೀರು ತುಂಬುವುದರಿಂದ ರೈತರ ಬಾವಿ ಹಾಗೂ ಬೋರವೆಲ್‌ಗಳ ಅಂತರ ಜಲಮಟ್ಟ ಹೆಚ್ಚಾಗುತ್ತದೆ. ಇದರಿಂದ ರೈತರು ಬೇಸಿಗೆಯಲ್ಲೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ರಾಜು ಕಾಗೆ, ಕಾಗವಾಡ ಶಾಸಕ