ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುವಾರ ತಡರಾತ್ರಿ ಕಿಡಿಗೇಡಿಗಳು ಯಾವುದೋ ಪದಾರ್ಥ ಎಸೆದು ಅವಮಾನ ಮಾಡಿರುವ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಘಟನೆಯಿಂದ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.ಮಚ್ಛೆ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ರಾಯಣ್ಣನ ಪ್ರತಿಮೆ ಸ್ಥಾಪಿಸಿದ್ದು, ಪ್ರತಿಮೆ ಮೇಲೆ ಆಯಿಲ್ ತರಹದ ದ್ರವ ಪದಾರ್ಥ ಸುರಿಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮರದಿಂದ ಹನಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಗಿಡದ ಸುತ್ತಮುತ್ತ ಎಲ್ಲಿಯೂ ದ್ರವ ಬಿದ್ದಿಲ್ಲ, ಪ್ರತಿಮೆ ಮೇಲಷ್ಟೆ ಹಾಗೂ ರಸ್ತೆಯ ಮೇಲೂ ಕೆಲವೆಡೆ ಬಿದ್ದಿದೆ. ಮೂರ್ತಿ ಮರದ ಕೆಳಗಡೆಯಿಲ್ಲ. ಮೂರ್ತಿಯ ಮುಂದೆ ನಿಂತು ಯಾರೋ ಕಿಡಿಗೇಡಿಗಳು ಎಸೆದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಜಿಲೇಬಿ ಪಾಕ್ ತರಹದ ಅಂಟಿನ ಪದಾರ್ಥ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪ್ರತಿಮೆಯನ್ನು ಸ್ವಚ್ಛಗೊಳಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆ ಬಗ್ಗೆ ಪ್ರಕರಣ ದಾಖಲು
ಘಟನೆ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ದೂರು ಸ್ವೀಕರಿಸಿದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಮೆಯ ಮೇಲಿದ್ದ ಪದಾರ್ಥದ ಮಾದರಿಯನ್ನು ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.
ಘಟನೆ ನಡೆದ ಸ್ಥಳದ ಸಮೀಪವೇ 10 ಮೀಟರ್ ದೂರದಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕಿಡಿಗೇಡಿಗಳ ಪತ್ತೆಗೆ ಶೋಧ ಮುಂದುವರಿದಿದೆ. ದೂರುದಾರರನ್ನು ವಿಚಾರಣೆಗೊಳಪಡಿಸಿದ್ದು, ಎಲ್ಲಾ ಆಯಾಮಗಳಲ್ಲೂ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಬಂದಿತ್ತು. ಮಚ್ಚೆ ಗ್ರಾಮದ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಏನೋ ಅಂಟಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು.ಕಳೆದ ಎರಡು ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮೂರ್ತಿಗೆ ಹಾಕಿರುವುದು ಮಸಿ ಅಲ್ಲ, ಅಂಟಿನಂತಹ ದ್ರಾವಣವಾಗಿರಬಹುದು ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡುಬಂದಿದೆ. ಆದರೆ, ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಸ್ಪಷ್ಟತೆ ಸಿಗಲಿದೆ. ಸದ್ಯ ಸ್ಥಳದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.