ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಸಂಚಾರ ನಿರ್ವಹಣಾ ಕೇಂದ್ರಕ್ಕೆ(ಟಿಎಂಸಿ) ನೆದರ್ಲ್ಯಾಂಡ್ಸ್‌ನ ಪ್ರಧಾನಿ ಎಚ್.ಇ. ಡಿಕ್ ಸ್ಕೂಫ್ ಭೇಟಿ ನೀಡಿ ಬೆಂಗಳೂರು ಸಂಚಾರ ನಿರ್ವಹಣೆ ವ್ಯವಸ್ಥೆಯ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ, ಡಿಕ್ ಸ್ಕೂಫ್ ಅವರನ್ನು ಸ್ವಾಗತಿಸಿ, ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರು ಸಂಚಾರ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಹೊಸ ಯೋಜನೆಗಳು ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಕ್ರಮಗಳ ಬಗ್ಗೆ, ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬಳಸುತ್ತಿರುವ ಸುಧಾರಿತ ತಂತ್ರಜ್ಞಾನಗಳು, ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳು ಮತ್ತು ರಿಯಲ್-ಟೈಮ್ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆ ಬಗ್ಗೆ, ಹೊಂದಾಣಿಕೆ ಆಧಾರಿತ ಟ್ರಾಫಿಕ್ ಸಿಗ್ನಲ್ ನಿಯಂತ್ರಣ ಹಾಗೂ ಸಮಗ್ರ ಏಕೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕಾರ್ಯಾಚರಣೆಗಳ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಲಾಯಿತು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.ಬೆಂಗಳೂರಿನ ಸಂಚಾರ ಪೊಲೀಸ್ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ಆರಂಭಿಕ ದಿನಗಳಲ್ಲಿ ಸಂಚಾರ ಪೊಲೀಸರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದರು? ಈ ಹಿಂದೆ ಪೊಲೀಸ್ ಸಮವಸ್ತ್ರಗಳು ಹೇಗಿದ್ದವು? ಹಿಂದೆ ಜಂಕ್ಷನ್‌ಗಳು, ಟ್ರಾಫಿಕ್ ಸಿಗ್ನಲ್‌ಗಳು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದವು ಎಂಬ ಛಾಯಾಚಿತ್ರಗಳ ವಸ್ತು ಸಂಗ್ರಹಾಲಯವು ಸಂಚಾರ ನಿರ್ವಹಣಾ ಕೇಂದ್ರದಲ್ಲಿದ್ದು ಅವುಗಳನ್ನು ಸ್ಕೂಫ್ ಅವರು ವೀಕ್ಷಿಸಿದರು.
ನೆದರ್‌ಲ್ಯಾಂಡ್ಸ್ ಮೂಲದ ಅಸ್ತ್ರಂ:
ನಗರದ ಸಂಚಾರ ದಟ್ಟಣೆ ಸಮಸ್ಯೆ ನಿರ್ವಹಿಸಲು ರಿಯಲ್ ಟೈಮ್ ಡೇಟಾ ಮತ್ತು ಕ್ಯುರೇಟೆಡ್ ತಂತ್ರಗಳನ್ನು ಬಳಸುತ್ತಿರುವ ಅಸ್ತ್ರಂ ವ್ಯವಸ್ಥೆಯನ್ನು ನೆದರ್‌ಲ್ಯಾಂಡ್ಸ್ ಮೂಲದ ಅರ್ಕಾಡಿಸ್ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಸಂಚಾರ ದಟ್ಟಣೆ ವಿಚಾರದಲ್ಲಿ ಜಾಗತಿಕವಾಗಿ ಕುಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಡಚ್ ಕಂಪನಿಯು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಕುರಿತು ಸ್ಕೂಫ್ ಮಾಹಿತಿ ಪಡೆದುಕೊಂಡರು.