ಮೂರು ತಿಂಗಳಲ್ಲಿ ಕೋಟೆನಾಡಲ್ಲಿ 18 ಬಾಲ್ಯ ವಿವಾಹ

KannadaprabhaNewsNetwork | Published : Nov 7, 2024 12:00 AM

ಸಾರಾಂಶ

18 child marriages in Kotenad in three months

-ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗರಂ । ಎಫ್ ಐಆರ್ ದಾಖಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

------

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ 18 ಬಾಲ್ಯವಿವಾಹ ಪ್ರಕರಣ ವರದಿಯಾಗಿರುವುದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗರಂ ಆದ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ್ಯ ವಿವಾಹ ಪ್ರಕರಣಗಳಲ್ಲಿ ನಿಯಮಾನುಸಾರ ಸಂಬಂದಪಟ್ಟವರ ಮೇಲೆ ಎಫ್ಐಆರ್ ದಾಖಲಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿರುವುದು ಕಳವಳಕಾರಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಕಿ ಅಂಶಗಳೇ ಆಘಾತಕಾರಿ ಅಂಶ ಹೊರಗೆಡವಿದೆ. ಮೂರು ತಿಂಗಳಲ್ಲಿ 18 ಬಾಲ್ಯವಿವಾಹಗಳು ನಡೆದಿರುವುದು ಸಹಿಸಲು ಅಸಾಧ್ಯ. ಆದರೆ, ಆರೋಗ್ಯ ಇಲಾಖೆಯ ಆರ್ ಸಿ ಹೆಚ್ ತಂತ್ರಾಂಶದಲ್ಲಿ ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ಅಂತ್ಯದವರೆಗೆ 194 ಬಾಲ ಗರ್ಭಿಣಿ ಪ್ರಕರಣ ಬೆಳಕಿಗೆ ಬಂದಿವೆ. ಬಾಲ್ಯ ವಿವಾಹ ತಡೆಯುವಲ್ಲಿ ವಿಫಲವಾಗಿರುವ ಕಾರಣದಿಂದಲೇ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿವೆ. ದೂರುಗಳನ್ನು ಆಧರಿಸಿ ಬಾಲ್ಯ ವಿವಾಹದ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ, ಹೆಚ್ಚಿನ ನಿಗಾವಹಿಸಿ ಸ್ವಯಂ ಪ್ರೇರಿತವಾಗಿ ಬಾಲ್ಯ ವಿವಾಹ ಪ್ರಕರಣ ತಡೆಯಲು ಅಧಿಕಾರಿಗಳು ಪ್ರಯತ್ನಿಸಬೇಕು. ಬಾಲ್ಯ ವಿವಾಹಕ್ಕೆ ಯತ್ನಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು, ಈ ಪ್ರಕರಣಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಬಾಲ್ಯ ವಿವಾಹ ತಡೆಗಟ್ಟುವಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಗಳು ಕಾರ್ಯನಿರ್ವಹಿಸಬೇಕು. ಪ್ರತಿ ತಿಂಗಳು ಶಾಲೆಗಳಲ್ಲಿ 7ಕ್ಕಿಂತ ಹೆಚ್ಚು ದಿನ ಗೈರಾದ ಮಕ್ಕಳ ವಿವರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆಯಿಂದ ನೀಡಬೇಕು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ನಿರ್ವಹಿಸುವುದರ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ ಜುಲೈನಿಂದ ಸೆಪ್ಟೆಂಬರ್‌ ವರೆಗೆ ಒಟ್ಟು 35 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು. ಇದರಲ್ಲಿ 17 ಪ್ರಕರಣಗಳನ್ನು ತಡೆಯಲಾಗಿದೆ. 18 ಪ್ರಕರಣಗಳಲ್ಲಿ ಬಾಲ್ಯವಿವಾಹ ನಡೆದಿದ್ದು, ಎಫ್ ಐಆರ್ ದಾಖಲಿಸಲಾಗಿದೆ. ಇಲಾಖೆಯಿಂದ ನಿರ್ವಹಿಸುವ ಸಖಿ (ಒನ್ ಸ್ಟಾಪ್ ಸೆಂಟರ್) ಕೇಂದ್ರದಲ್ಲಿ ಸೆಪ್ಟಂಬರ್ ಅಂತ್ಯದವರೆಗೆ 7 ಕೌಟುಂಬಿಕ ಕಲಹ, 4 ಅತ್ಯಾಚಾರ, 22 ಪೊಕ್ಸೋ, 15 ಕಾಣೆ, 14 ಇತರೆ ಸೇರಿ 62 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವು ನೀಡಲಾಗಿದೆ ಎಂದು ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದರು.

ಜಿಲ್ಲೆಯಲ್ಲಿ 2023-24 ರಲ್ಲಿ ಒಟ್ಟು 193 ಬಾಲ್ಯ ವಿವಾಹ ಪ್ರಕರಣ ಕುರಿತು ಮಕ್ಕಳ ರಕ್ಷಣಾ ಘಟಕಕ್ಕೆ ದೂರು ದಾಖಲಾಗಿದ್ದವು. ಇದರಲ್ಲಿ 102 ಪ್ರಕರಣ ತಡೆಯಲಾಗಿದೆ. ಒಟ್ಟು 91 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಏಪ್ರಿಲ್ 2024 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ 102 ದೂರುಗಳು ದಾಖಲಾಗಿದ್ದು, 53 ಪ್ರಕರಣಗಳಲ್ಲಿ ತಡೆಯಲಾಗಿದೆ. 49 ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ 76 ಪೋಕ್ಸೋ ಪ್ರಕರಣ ದಾಖಲಾಗಿವೆ. ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಸರ್ಕಾರಿ ವಿಶೇಷ ದತ್ತು ಕೇಂದ್ರ ಮಂಜೂರು ಆಗಿದ್ದು, ಪ್ರಸ್ತುತ ಬಾಲಕಿಯರ ಬಾಲ ಮಂದಿರದ ಕಟ್ಟಡದಲ್ಲಿ ದತ್ತು ಸ್ವೀಕಾರ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

--------------

ಪೋಟೋ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

-------

5 ಸಿಟಿಡಿ 7

Share this article