18ರಿಂದ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

KannadaprabhaNewsNetwork |  
Published : May 14, 2025, 01:59 AM IST
ಪೋಟೋ: 13ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಮೇ 18ರಿಂದ 20ರವರೆಗೆ ಮೂರು ದಿನಗಳ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಶಿವಮೊಗ್ಗ: ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಮೇ 18ರಿಂದ 20ರವರೆಗೆ ಮೂರು ದಿನಗಳ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿತ್ತು. ಇದೀಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.

ಈ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 18ರಂದು ಸಂಜೆ 5 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸುವರು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಚುನಾಯಿತ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 15000 ನೌಕರ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದ್ದು, ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳಿಗೆ ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೈಯುಕ್ತಿಕವಾಗಿ 97 ಸ್ಪರ್ಧೆಗಳು ನಡೆದರೆ 16 ಗುಂಪು ಸ್ಪರ್ಧೆಗಳು ನಡೆಯಲಿವೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವೈಯಕ್ತಿಕ 15 ಗುಂಪು 16 ಸ್ಪರ್ಧೆಗಳು ನಡೆಯಲಿದೆ. ವಿಶೇಷವಾಗಿ ಪ್ರತಿ ಕ್ರೀಡೆಗಳಲ್ಲೂ ಪುರುಷ ಮತ್ತು ಮಹಿಳೆಯರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಮೇ 18ರಂದು ನಗರದ ಎನ್ಇಎಸ್ ಮೈದಾನದಲ್ಲಿ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಪಾಲ್ಗೊಳ್ಳುವ ಎಲ್ಲ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮೇ 18ರಂದು ಸಂಜೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟದ ಉದ್ಘಾಟನೆ ನೆರವೇರಿಸುವರು. ಅಂದು ಸಂಜೆ 7ಕ್ಕೆ ರಾಜೇಶ್ ಕೃಷ್ಣನ್ ಅವರು ಗಾನಸುಧಾ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಈ ಕಾರ್ಯಕ್ರಮದಲ್ಲಿ ಸರಿಗಮಪ ಸ್ಪರ್ಧೆಯ ಪ್ರತಿಭಾವಂತ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಮೇ 19ರಂದು ಸಂಜೆ ರಾಜ್ಯದ ಪ್ರತಿಭಾವಂತ ಜನಪದ ಕಲಾವಿದರನ್ನೊಳಗೊಂಡ ಜನಪದ ದಿಬ್ಬಣ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇ 20ರಂದು ಸಂಜೆ ಕುವೆಂಪು ರಂಗ ಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ವಿಜೇತರಾದ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಸರ್ಕಾರವು ಓಓಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕ್ರೀಡಾಕೂಟ ಅತ್ಯಂತ ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನೊಳಗೊಂಡ ಹಲವು ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ನೀಡಲಾಗಿದೆ ಎಂದರು.

ಈ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಈ ಕಾರ್ಯಕ್ರಮಕ್ಕೆ ನಿಯಮಾನುಸಾರ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಪಾಪಣ್ಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ, ದಿನೇಶ್, ಸತೀಶ್, ಆರ್.ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

15 ದಿನದ ಹಿಂದೆ ಮದುವೆ ಆಗಿದ್ದ ಜೋಡಿ ಭೀಕರ ಅಪಘಾತಕ್ಕೆ ಬಲಿ
ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌