ರೂಂ ಬುಕ್ ಮಾಡುವ ನೆಪದಲ್ಲಿ 18 ಸಾವಿರ ರು. ವಂಚಿಸಿದ ಸೈಬರ್ ವಂಚಕರು

KannadaprabhaNewsNetwork |  
Published : Jan 19, 2024, 01:45 AM IST
೩೨ | Kannada Prabha

ಸಾರಾಂಶ

ಮಡಿಕೇರಿ ನಗರದ ಹೊಟೇಲೊಂದರ ಮಾಲೀಕರಿಗೆ ಸೈಬರ್ ವಂಚಕರು ಕೊಠಡಿ ಬುಕ್‌ ಮಾಡುವ ನೆಪದಲ್ಲಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ೧೮ ಸಾವಿರ ಕಳೆದುಕೊಂಡದ್ದು ತಿಳಿದು ಎಚ್ಚೆತ್ತ ಮಾಲೀಕರಿಂದ ಕೊಡಗು ಜಿಲ್ಲಾ ಸೈಬರ್ ಅಪರಾಧ ಪತ್ತೆದಳಕ್ಕೆ ದೂರು.

ಕನ್ನಡಪ್ರಭ ವಾರ್ತೆ ಮಡಿಕೇರಿರೂಂ ಬುಕ್ ಮಾಡುವ ನೆಪದಲ್ಲಿ ಮಡಿಕೇರಿ ನಗರದ ಹೊಟೇಲೊಂದರ ಮಾಲೀಕರಿಗೆ ಸೈಬರ್ ವಂಚಕರು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ರೂಂ ಬೇಕೆಂದು ಆನ್‌ಲೈನ್ ಮೂಲಕ ಹೊಟೇಲ್‌ಗೆ ಕೋರಿಕೆ ಕಳುಹಿಸಿದ್ದಾನೆ. ರೂಂ ಬುಕ್ ಮಾಡಿಕೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕೆಂದು ತಿಳಿಸಿದ ಹೊಟೇಲ್ ವ್ಯವಸ್ಥಾಪಕರು ಮಾಲೀಕರ ಹಣ ವರ್ಗಾವಣೆಯ ಮೊಬೈಲ್ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ. ರೂಂ ಬೇಡಿಕೆಯನ್ನಿಟ್ಟಿದ್ದ ವ್ಯಕ್ತಿ ತನ್ನ ಮೊಬೈಲ್ ಮೂಲಕ 20 ಸಾವಿರ ರು. ಪಾವತಿ ಮಾಡಿರುವ ಸಂದೇಶದ ಸ್ಕ್ರೀನ್ ಶಾಟನ್ನು ಹೊಟೇಲ್ ಮಾಲೀಕರಿಗೆ ಕಳುಹಿಸುತ್ತಾನೆ. ನಂತರ ತಕ್ಷಣ ಕರೆ ಮಾಡಿ ಮುಂಗಡ ಹಣ 2 ಸಾವಿರಕ್ಕೆ ಬದಲಾಗಿ 20 ಸಾವಿರ ರು. ಪಾವತಿ ಮಾಡಿರುವೆ, 18 ಸಾವಿರ ರು.ವನ್ನು ನನಗೆ ಮರಳಿಸಿ ಎಂದು ಮಾಲೀಕರಲ್ಲಿ ಮನವಿ ಮಾಡಿದ್ದ.

20 ಸಾವಿರ ರು. ಬಂದಿರುವ ಬಗ್ಗೆ ಸ್ಕ್ರೀನ್ ಶಾಟ್ ಮೂಲಕ ಮನವರಿಕೆ ಮಾಡಿಕೊಂಡ ಮಾಲೀಕರು ಕರೆ ಮಾಡಿದಾತನಿಗೆ 18 ಸಾವಿರ ರು.ವನ್ನು ಮರಳಿಸಿದರು. ಸ್ವಲ್ಪ ಹೊತ್ತು ಕಳೆದ ನಂತರ ಅದೇ ವ್ಯಕ್ತಿಯ ಮೊಬೈಲ್ ಸಂಖ್ಯೆಯಿಂದ 27 ಸಾವಿರ ರು. ಪಾವತಿಯಾಗಿರುವ ಬಗ್ಗೆ ಸ್ಕ್ರೀನ್‌ಶಾಟ್ ಸಂದೇಶ ಬರುತ್ತದೆ. ಆತ ಮತ್ತೆ ಕರೆ ಮಾಡಿ ನಾನು ಯಾವುದೋ ಆಸ್ಪತ್ರೆಗೆ ಪಾವತಿಸಬೇಕಾದ ಹಣವನ್ನು ತಮಗೆ ತಪ್ಪಾಗಿ ಕಳುಹಿಸಿದ್ದೇನೆ, ಹಣವನ್ನು ಮರಳಿಸಿ ಎಂದು ಕೋರಿಕೆ ಇಟ್ಟಿದ್ದ.

ಇದರಿಂದ ಸಂಶಯಗೊಂಡ ಹೊಟೇಲ್ ಮಾಲೀಕರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ ವಂಚಕ ವ್ಯಕ್ತಿ ಯಾವುದೇ ಹಣವನ್ನು ಪಾವತಿಸಿರುವುದಿಲ್ಲ. 20 ಸಾವಿರ ರು. ಮತ್ತು 27 ಸಾವಿರ ರು. ಪಾವತಿಸಿರುವುದು ಸುಳ್ಳೆಂದು ಮನವರಿಕೆಯಾಗುತ್ತದೆ. ತಮ್ಮ ಖಾತೆಯಿಂದ 18 ಸಾವಿರ ರು. ಕಳೆದುಕೊಂಡಿರುವುದು ಖಾತ್ರಿಯಾದ ತಕ್ಷಣ ವಂಚಕ ಕರೆ ಮಾಡಿದ ಮತ್ತು ಹಣದ ವ್ಯವಹಾರದ ಸ್ಕ್ರೀನ್ ಶಾಟ್ ಕಳುಹಿಸಿದ ಎರಡೂ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಾರೆ. ಆದರೆ ಯಾವ ಸಂಖ್ಯೆಯೂ ಕಾರ್ಯನಿರ್ವಹಿಸಲಿಲ್ಲ.

ತಕ್ಷಣ ಎಚ್ಚೆತ್ತುಕೊಂಡ ಹೊಟೇಲ್ ಮಾಲೀಕರು ತಮಗಾದ ವಂಚನೆ ಬಗ್ಗೆ ಕೊಡಗು ಜಿಲ್ಲಾ ಸೈಬರ್ ಅಪರಾಧ ಪತ್ತೆದಳಕ್ಕೆ ದೂರು ಸಲ್ಲಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ