ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 10 ಕ್ರಸ್ಟ್ ಗೇಟ್‌ಗಳ ಮೂಲಕ 18,686 ಕ್ಯುಸೆಕ್ ನೀರನ್ನು ಬುಧವಾರ ನದಿಗೆ ಹರಿಸಲಾಯಿತು.
ಪ್ರವಾಹ ಭೀತಿ:
ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.ಹಂಪಿ ನದಿಯಲ್ಲಿ ಸಹ ಪ್ರವಾಹ ಭೀತಿ ಎದುರಾಗಿದ್ದು, ನದಿ ತಟದ ಕೆಲ ಸ್ಮಾರಕಗಳು ನೀರಿನಲ್ಲಿ ಮುಳುಗಡೆಯಾಗಿವೆ. ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ನದಿ ತಟದಲ್ಲಿ ಮೊಕ್ಕಾಂ ಹೂಡಿದ್ದಾರೆ. ನದಿಯ ನೀರಿಗೆ ಪ್ರವಾಸಿಗರು ಇಳಿಯದಂತೆ ಎಚ್ಚರ ವಹಿಸಿದ್ದಾರೆ.
ಬೋಟ್ ಸಂಚಾರ ಸ್ಥಗಿತ:ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಹಿನ್ನೆಲೆಯಲ್ಲಿ ಹಂಪಿ ಹಾಗೂ ಆನೆಗೊಂದಿ ನಡುವೆ ಪ್ರವಾಸಿಗರನ್ನು ಹೊಯ್ಯುತ್ತಿದ್ದ ಬೋಟ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಅಧಿಕಾರಿಗಳಿಂದ ಪರಿಶೀಲನೆ:ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ ಪಿ. ತಾಲೂಕಿನ ಹಂಪಿ ಮತ್ತು ಹೊಸೂರು ಗ್ರಾಮದ ನದಿ ತೀರಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವಜೀತ ಮೆಹತಾ, ಪಿಡಿಒ ಗಂಗಾಧರ, ಕಂದಾಯ ನಿರೀಕ್ಷಕರಾದ ಗುರುಬಸವರಾಜ ಸಿ., ಅನಿಲ್ ಕುಮಾರ್ ಮತ್ತಿತರರಿದ್ದರು.
ಪ್ರವಾಸಿಗರ ದಂಡು:ಒಳಹರಿವು ಅಧಿಕವಾಗುತ್ತಿದಂತೆ ತುಂಗಭದ್ರಾ ಜಲಾಶಯ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಜಲಾಶಯದಿಂದ ದುಮ್ಮಿಕ್ಕುವ ನೀರಿನ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಡ್ಯಾಂನತ್ತ ಧಾವಿಸಿ ಬರುತ್ತಿದ್ದಾರೆ. ಮೊಬೈಲ್ ಫೋನ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.