ಮಳೆಯಿಂದ ಮೂಲಸೌಕರ್ಯಗಳಿಗೆ 183 ಕೋಟಿ ರು. ನಷ್ಟ: ಉಡುಪಿ ಎಡಿಸಿ ಮಮತಾದೇವಿ

KannadaprabhaNewsNetwork |  
Published : Aug 14, 2024, 01:02 AM IST
ಮಮತಾ13 | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಎಡಿಸಿ ಮಮತಾ ದೇವಿ ಮಳೆ ಹಾನಿ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಈ ಬಾರಿಯ ಇದುವರೆಗಿನ ಮಳೆಗೆ ಜಿಲ್ಲೆಯಲ್ಲಿ ಸಾರ್ವಜನಿಕ ಮೂಲಸೌಕರ್ಯಗಳಾದ ರಸ್ತೆ, ಮೇಲ್ಸೇತುವೆ, ಶಾಲೆ, ಅಂಗನವಾಡಿ ಕಟ್ಟಡಗಳು ಸೇರಿದಂತೆ ಒಟ್ಟು 183 ಕೋಟಿ ರು. ಗಳಷ್ಟು ಅಂದಾಜು ನಷ್ಟ ಉಂಟಾಗಿದೆ. ಇವುಗಳ ಪುನರ್ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳ‍ವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ. ಖಾತೆಯಲ್ಲಿ 16.93 ಕೋಟಿ ರು.ಗಳಷ್ಟು ಅನುದಾನ ಲಭ್ಯವಿದೆ. ತಾಲೂಕು ಮಟ್ಟದ ತಹಸೀಲ್ದಾರರ ವಿಪತ್ತು ಪಿ.ಡಿ. ಖಾತೆಯಲ್ಲಿ 2.61 ಕೋಟಿ ರು. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಅನುದಾನ ಬಳಸಿಕೊಳ್ಳಬಹುದಾಗಿದೆ ಎಂದರು.

ಮಳೆಯ ಪ್ರಮಾಣ ಕಳೆದ ನಾಲ್ಕೈದು ದಿನಗಳಿಂದ ಕಡಿಮೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಮಳೆಯ ನೀರು ಕೆಲವು ವಸ್ತುಗಳಲ್ಲಿ ಸಂಗ್ರಹಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದರಿಂದಾಗಿ ಡೆಂಘೀ ಉಲ್ಬಣವಾಗುವ ಸಾಧ್ಯತೆಗಳು ಇವೆ. ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರೊಂದಿಗೆ ಡೆಂಘೀ ಸೇರಿದಂತೆ ಮತ್ತಿತರ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನೀರಿನಲ್ಲಿ ಯಾವುದೇ ರೀತಿಯ ತೈಲ ಹಾಗೂ ರಾಸಾಯನಿಕ ಸೇರುವಿಕೆಯನ್ನು ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಸಮುದ್ರ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದ ನೀರಿನಲ್ಲಿ ತೈಲ ಅಥವಾ ರಾಸಾಯನಿಕ ಸೋರಿಕೆಯಾಗಿ ಪರಿಸರ ಮಾಲಿನ್ಯ ಸಂರಕ್ಷಿಸಲು ಹಾಗೂ ಅಪಾಯವನ್ನು ಕಡಿಮೆಮಾಡಲು ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು.ಸಭೆಯಲ್ಲಿ ಸಹಾಯಕ ಕಮೀಷನರ್ ಮಹೇಶ್ಚಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ