18, 19ಕ್ಕೆ ಬೆಂಗಳೂರಲ್ಲಿ ಬ್ರಾಹ್ಮಣ ಮಹಾ ಸಮ್ಮೇಳನ

KannadaprabhaNewsNetwork |  
Published : Jan 14, 2025, 01:02 AM IST
Brahmana Sangha 1 | Kannada Prabha

ಸಾರಾಂಶ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜ.18, 19 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ವಿಶ್ವಾಮಿತ್ರ’ ಘೋಷವಾಕ್ಯದಡಿ ಬ್ರಾಹ್ಮಣ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜ.18, 19 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ವಿಶ್ವಾಮಿತ್ರ’ ಘೋಷವಾಕ್ಯದಡಿ ಬ್ರಾಹ್ಮಣ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾಸಭೆಯು ಸಾರ್ಥಕ 50 ವಸಂತಗಳನ್ನು ಪೂರೈಸಿರುವುದರಿಂದ ವಿಶ್ವಾಮಿತ್ರ ಘೋಷವಾಕ್ಯದಡಿ ಬ್ರಾಹ್ಮಣ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ವಿಶ್ವದೆಲ್ಲೆಡೆ ಬೆಳಕು ಪಸರಿಸಲಿ, ಸರ್ವಜನಾಂಗಕ್ಕೂ ಒಳಿತಾಗಲಿ ಎಂಬ ಸದಾಶಯ ಇದರ ಹಿಂದಿದೆ. 50 ಸಾವಿರದಿಂದ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಸನಾತನ ಧರ್ಮದ ಸಂರಕ್ಷಣೆ, ಬ್ರಾಹ್ಮಣ ಸಮಾಜದ ತ್ರಿಮತಸ್ಥರಲ್ಲಿ ಸಮನ್ವಯ ಉಂಟು ಮಾಡುವುದೂ ಕಾರ್ಯಕ್ರಮದ ಉದ್ದೇಶ. ತ್ರಿಮತಸ್ಥ ಶ್ರೀಗಳೂ ಆಗಮಿಸಲಿದ್ದು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಸಮಾಜಕ್ಕೆ ನೀಡಿರುವ ಕೊಡುಗೆ ಬಗ್ಗೆ ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಸಮಾರಂಭದ ಪೂರ್ವಭಾವಿಯಾಗಿ ಜ.17 ರಂದು ಸಂಜೆ 5.30ಕ್ಕೆ ಗಣಪತಿ ಪೂಜೆ, ಮಹಾ ಸಂಕಲ್ಪ ಮತ್ತಿತರ ವಿಧಿಗಳು ನೆರವೇರಲಿವೆ. ಜ.18 ರಂದು ಬೆಳಗ್ಗೆ 5.30ಕ್ಕೆ ಶೃಂಗೇರಿ ಶಾರದಾ ಪೀಠದ ವಿಧುಶೇಖರಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಗಾಯತ್ರಿ ಮಹಾಯಾಗ ಆರಂಭವಾಗಲಿದೆ. 7.30ಕ್ಕೆ ಸಮ್ಮೇಳನದ ಧ್ವಜಾರೋಹಣ ನೆರವೇರಲಿದೆ. 8.30 ರಿಂದ 9 ಗಂಟೆಗೆ ಹೋಮ ಪೂರ್ಣಾಹುತಿ ನಡೆಯಲಿದ್ದು ಬಳಿಕ ಸಮ್ಮೇಳನ ಉದ್ಘಾಟನೆಯಾಗಲಿದೆ ಎಂದು ವಿವರಿಸಿದರು.

ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಶೃಂಗೇರಿ ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ, ಮನ್ನಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಆವನಿ ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು. ಮಧ್ಯಾಹ್ನ 11.30ಕ್ಕೆ ಸಭಾ ಕಾರ್ಯಕ್ರಮವಿದ್ದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸ್ಮರಣ ಸಂಚಿಕೆ ಲೋಕಾರ್ಪಣೆ: ಸಚಿವ ದಿನೇಶ್‌ ಗುಂಡೂರಾವ್‌ ಅವರು ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಸಮುದಾಯದಲ್ಲಿ ವಧುವಿಗೆ ಹೆಚ್ಚಿನ ಹುಡುಕಾಟ ನಡೆಯುತ್ತಿರುವುದರಿಂದ ಮಾಹಿತಿ ನೀಡುವ ಪಾಣಿಗ್ರಹಣ ವೇದಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದಾರೆ. ವೇದಾಂತ ತತ್ವ ಚಿಂತನಂ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರ, ಮರೆಯಲಾಗದ ಮಹನೀಯರು ಮತ್ತಿತರ ಕೃತಿಗಳು ಬಿಡುಗಡೆಯಾಗಲಿವೆ ಎಂದು ಮಾಹಿತಿ ನೀಡಿದರು.

ಜ.19 ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ್‌ ಕಜೆ ಸೇರಿ ಸಮುದಾಯದ ಸಾಧಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು. ವಾಣಿಜ್ಯ ಸಮಾವೇಶವನ್ನೂ ಆಯೋಜಿಸಲಾಗಿದೆ. ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದ ಗಣ್ಯರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಅವಧಿಯಲ್ಲಿ ಕೈಗೊಂಡ ಸಾಧನೆಗಳ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಟಿ.ಎಸ್‌.ಶ್ರೀವತ್ಸ, ವಿದ್ವಾನ್‌ ಭಾನುಪ್ರಕಾಶ್‌ ಶರ್ಮ, ವಿದ್ವಾನ್‌ ಪಾವಗಡ ಪ್ರಕಾಶರಾವ್‌ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...