ಜಮ್ಮಿಟ್ಟಿಗೆ ಅಂಗನವಾಡಿಗೆ 18ನೇ ವಾರ್ಷಿಕೋತ್ಸವ

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಪ್ರತೀ ವರ್ಷವೂ ಪೋಷಕರು ಹಾಗೂ ದಾನಿಗಳ ಸಹಕಾರದೊಂದಿಗೆ ಹರಿಹರಪುರದ ಜಮ್ಮಿಟ್ಟಿಗೆ ಅಂಗನವಾಡಿ ವಾರ್ಷಿಕೋತ್ಸವ ಸಂಭ್ರಮದಿಂದ ಏರ್ಪಡಿಸಲಾಗುತ್ತಿದೆ. ಪೋಷಕರು ಹಾಗೂ ದಾನಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಿ ಸ್ಮರಣೀಯಗೊಳಿಸುವುದು ವಾಡಿಕೆ.

- ಮಕ್ಕಳಿಂದ ನೃತ್ಯ ಪ್ರದರ್ಶನ, ಇತರೆ ಸಾಂಸ್ಕೃತಿಕ ಕಾರ್ಯಕ್ರಮ । ದಾನಿಗಳ ಸಹಕಾರಕನ್ನಡಪ್ರಭ ವಾರ್ತೆ ಕೊಪ್ಪ

ಹರಿಹರಪುರದ ಜಮ್ಮಿಟ್ಟಿಗೆ ಅಂಗನವಾಡಿ ಕೇಂದ್ರದ 18ನೇ ವರ್ಷದ ವಾರ್ಷಿಕೋತ್ಸವ ಮಂಗಳವಾರ ಅದ್ಧೂರಿಯಿಂದ ನಡೆಯಿತು. ಅಂಗನವಾಡಿ ಪುಟ್ಟ ಮಕ್ಕಳು ಚಲನಚಿತ್ರದ ಹಾಡುಗಳಿಗೆ ನೃತ್ಯ ಪ್ರದರ್ಶನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಂಗನವಾಡಿ ಕಾರ್ಯಕರ್ತೆ ಶಫಿಯಾ ಮಾತನಾಡಿ, ಕಳೆದ 18 ವರ್ಷಗಳಿಂದ ಜಮ್ಮಿಟ್ಟಿಗೆ ಅಂಗನವಾಡಿ ಕಾರ್ಯಾಚರಿಸುತ್ತಿದ್ದು ಇಲ್ಲಿ ಮಕ್ಕಳ ವಯಸ್ಸಿಗನುಗುಣ ವಾಗಿ ಕಲಿಕೆಯೊಂದಿಗೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಇಲ್ಲಿಗೆ ಸೇರಿಸುತ್ತಿದ್ದಾರೆ. ಗ್ರಾಪಂ ಸದಸ್ಯರು, ಮಕ್ಕಳ ಪೋಷಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲವಿಕಾಸ ಸಮಿತಿ ಸದಸ್ಯರು, ಮೇಲ್ವಿಚಾರಕರು ಹಾಗೂ ಗ್ರಾಮಸ್ಥರು ಅಂಗನವಾಡಿಗೆ ಸದಾ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದು, ಅಂಗನವಾಡಿ ಬೆಳವಣಿಗೆಗೆ ಸಹಕಾರಿಯಾಗಿದೆ.

ಪ್ರತೀ ವರ್ಷ ಪೋಷಕರು ಹಾಗೂ ದಾನಿಗಳ ಸಹಕಾರದೊಂದಿಗೆ ಅಂಗನವಾಡಿಯಲ್ಲಿ ವಾರ್ಷಿಕೋತ್ಸವ ಏರ್ಪಡಿಸಲಾಗುತ್ತಿದೆ. ಅಂಗನವಾಡಿ ಮುಗಿಸಿ 1ನೇ ತರಗತಿ ಸೇರುವ ಮಕ್ಕಳ ಪೋಷಕರು ಸವಿನೆನಪಿಗೆ ಏನಾದರೊಂದು ವಸ್ತುವನ್ನು ಅಂಗನವಾಡಿಗೆ ದೇಣಿಗೆ ನೀಡಿ ಹೋಗುತ್ತಾರೆ. ಈ ಬಾರಿಯೂ ಮಕ್ಕಳಿಗೆ ನೀಡುವ ಬಹುಮಾನ ಹಾಗೂ ಮಧ್ಯಾಹ್ನದ ಊಟೋಪಚಾರದ ವೆಚ್ಚವನ್ನು ಮಕ್ಕಳ ಪೋಷಕರು ಹಾಗೂ ದಾನಿಗಳು ಭರಿಸಿದ್ದು, ಶಾಮಿಯಾನದ ಖರ್ಚು ವೆಚ್ಚವನ್ನು ಮಾಜಿ ತಾಪಂ ಉಪಾಧ್ಯಕ್ಷ ಮನ್ಸೂರ್ ಆಲಿ ನೀಡಿದ್ದಾರೆ. ಅಂಗನವಾಡಿ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಬಾಲವಿಕಾಸ ಸಮಿತಿ ಅಧ್ಯಕ್ಷೆ ಅಮೃತ ನಾಗಭೂಷಣ್, ಗ್ರಾಪಂ ಅಧ್ಯಕ್ಷೆ ಸವಿತಾ ಸತ್ಯನಾರಾಯಣ, ಜಮ್ಮಿಟ್ಟಿಗೆ ವ್ಯಾಪ್ತಿಯ ಗ್ರಾ.ಪಂ ಸದಸ್ಯರಾದ ಮಂಜುನಾಥ್ ಎಚ್.ಪಿ. ವೀಣಾ ರಾಘವೇಂದ್ರ, ಆಶಾ ವಿಜಯೇಂದ್ರ, ಇಲಾಖೆ ಮೇಲ್ವಿಚಾರಕಿ ಅನುಸೂಯ, ಆರೋಗ್ಯ ಇಲಾಖೆಯ ವಾಗೇಶ್ವರಿ, ಸಿಂಧು ಬಿ.ಎಸ್. ಮುಂತಾದವರಿದ್ದು ಪುಟಾಣಿಗಳ ವಾರ್ಷಿಕೋತ್ಸವ ಸಮಾರಂಭಕ್ಕೆ ಶುಭ ಹಾರೈಸಿದರು.

ದಿನಕ್ಕೊಬ್ಬ‘ಸ್ತ್ರೀ’ ಮನೆಯಿಂದ ಬರುತಿತ್ತು ಮಕ್ಕಳಿಗೆ ಆಹಾರ

ಅಂಗನವಾಡಿ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಆಹಾರ ವ್ಯವಸ್ಥೆ ಇಲ್ಲದೆ ಇರುವ ಸಮಯದಲ್ಲಿ ಇಲ್ಲಿನ ಸ್ತ್ರಿ ಶಕ್ತಿ ಸಂಘದ ಸದಸ್ಯರು ದಿನಕ್ಕೊಂದು ಮನೆಯವರಂತೆ ತಮ್ಮ ಮನೆಯಲ್ಲಿಯೇ ಆಹಾರ ತಯಾರಿಸಿಕೊಂಡು ಮಕ್ಕಳಿಗೆ ನೀಡುತ್ತಿದ್ದರು. ಇಂಥ ಆದರ್ಶ ಕಾರ್ಯದ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲೇ ‘ಸ್ತ್ರೀಶಕ್ತಿ’ ಸಂಘದ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

Share this article