ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಹರನಾಳ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ 15ನೇ ಹಣಕಾಸು ಹಾಗೂ ಪ್ರವರ್ಗ-1 ವಸೂಲಿಯಾದ ₹19.22 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಸೂಕ್ತ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.ಇತ್ತೀಚಿಗೆ ತಾಲೂಕಿನ ಹರನಾಳ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಶಿವಾನಂದ ಯಾದಗಿರಿ ಹಾಗೂ 9 ಜನ ಸದಸ್ಯರು ಮೊದಲಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ನಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಅವಿಶ್ವಾಸ ಗೊತ್ತುವಳಿ ಹಾಗೂ ನೂತನ ಅಧ್ಯಕ್ಷರ ಆಯ್ಕೆಯ ನಡುವಿನ ಸಮಯದಲ್ಲಿ 15ನೇ ಹಣಕಾಸು ಹಾಗೂ ಪ್ರವರ್ಗ-1 ವಸೂಲಿಯಾದ ಸುಮಾರು ₹ 19.22 ಹಣವನ್ನು ಯಾವುದೇ ಸದಸ್ಯರಿಗೆ ಮಾಹಿತಿ ನೀಡದೆ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದೇವೆ. ತಾಲೂಕು ಪಂಚಾಯಿತಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದ ಕಾರಣ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಅವರು ಕೂಡಲೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಪಿಡಿಒರನ್ನು ಸೇವೆಯಿಂದ ವಜಾ ಮಾಡಬೇಕು. ಸರ್ಕಾರದ ಹಣವನ್ನು ವಾಪಸ್ ಪಡೆಯಲು ಆದೇಶ ನೀಡಬೇಕು ಎಂದು ಅಧ್ಯಕ್ಷರು ಹಾಗೂ ಸದಸ್ಯರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಿವಾನಂದ ಯಾದಗಿರಿ, ಸದಸ್ಯರಾದ ವಿಜಯಲಕ್ಷ್ಮಿಬಿರಾದಾರ, ದುಂಡಮ್ಮ ಹದ್ನೂರ, ಸುಷ್ಮಾ ಸಾರವಾಡ, ಸುಜ್ಞಾನಿ ಪೂಜಾರಿ, ಸೀತಾ ನಾಯ್ಕೋಡಿ, ಸೋಮವ್ವ ರತ್ನಾಕರ, ಸಿದ್ದಪ್ಪ ಹೀರೆಕುರುಬರ, ಸುರೇಶ ಅಂಬಳನೂರ, ಭೀಮಪ್ಪ ಭಂಡಾರಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.