ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಬಾಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಸಾಬೀತುಗೊಂಡು ತಿಂಗಳು ಕಳೆದರೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿಬರುತ್ತಿದೆ.ಬಾಗೆ ಗ್ರಾ.ಪಂನಲ್ಲಿ ೨೦೧೯ನೇ ಸಾಲಿನಿಂದ ೧೫ನೇ ಹಣಕಾಸು ಅನುದಾನದಲ್ಲಿ ೫೬ ಲಕ್ಷಕ್ಕೂ ಅಧಿಕ ಹಣ ದುರ್ಬಳಕೆಯಾಗಿದ್ದರೆ, ೧೧ ಲಕ್ಷ ತೆರಿಗೆ ಸಂಗ್ರಹದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಎಸ್‌ಕ್ರೂ ಅನುದಾನದಲ್ಲಿ ೧೫ ಲಕ್ಷ ಸೇರಿದಂತೆ ಮೂರು ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚಿನ ಭ್ರಷ್ಟಚಾರ ನಡೆದಿದ್ದು, ಈ ಅವಧಿಯಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾಗಿದ್ದ ಮೊಣಪ್ಪ, ಪರಮೇಶಯ್ಯ ಹಾಗೂ ಚಿನ್ನಸ್ವಾಮಿ ಎಂಬ ಮೂವರು ಅಭಿವೃದ್ಧಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ವಿರುದ್ಧ ೨೦೨೩ರ ಜೂನ್ ತಿಂಗಳಿನಲ್ಲಿ ಬಾಗೆ ಗ್ರಾ.ಪಂ ಸದಸ್ಯರೊಬ್ಬರು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭ್ರಷ್ಟಚಾರ ನಡೆದಿರುವುದು ಸತ್ಯ ಎಂಬ ವರಧಿಯನ್ನು ೨೦೨೩ರ ನವಂಬರ್ ತಿಂಗಳಿನಲ್ಲಿ ಜಿ.ಪಂ ಕಳುಹಿಸಿಕೊಡಲಾಗಿತ್ತು. ವರದಿ ಪರಿಶೀಲಿಸಿದ ವಿಶೇಷ ಲೆಕ್ಕ ತಪಾಸಣಾಧಿಕಾರಿ ಲೆಕ್ಕ ತಪಾಸಣೆ ನಡೆಸಿ ಭ್ರಷ್ಟಚಾರ ನಡೆದಿರುವುದು ದೃಢ ಎಂಬ ವರದಿಯನ್ನು ಜಿ.ಪಂ ಮುಖ್ಯನಿರ್ವಹಣಾಧಿಕಾರಿಗೆ ಸಲ್ಲಿಸಿದ್ದರು. ಲೆಕ್ಕತಪಾಸಣಾಧಿಕಾರಿ ವರದಿ ಆಧರಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿಶೇಷ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಸಂಬರ್ ೨೦೨೪ರಲ್ಲಿ ತಾ.ಪಂಗೆ ಸೂಚಿಸಿದ್ದರು. ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತೊಮ್ಮೆ ವಿವರಣಾತ್ಮಕವಾಗಿ ಪರಿಶೀಲನೆ ನಡೆಸಿದ ತಾ.ಪಂ ಅಧಿಕಾರಿಗಳು ಈಗಾಗಲೇ ಮೊಣ್ಣಪ್ಪ ಹಾಗೂ ಪರಮೇಶಯ್ಯ ಎಂಬ ಅಧಿಕಾರಿಗಳು ನಿವೃತ್ತಿಗೊಂಡಿದ್ದು ಇವರ ಭತ್ಯೆಗಳನ್ನು ತಡೆಹಿಡಿಯ ಬಹುದು ಹಾಗೂ ಹಾಲಿ ಕರ್ತವ್ಯದಲ್ಲಿರುವ ಚಿನ್ನಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ವರದಿಯನ್ನು ಫೆಬ್ರವರಿ ೧೫, ೨೦೨೫ರಂದು ಜಿ.ಪಂಗೆ ಕಳುಹಿಸಿಕೊಡಲಾಗಿದೆ. ಆದರೆ, ವರದಿ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಕೈ ಸೇರಿ ತಿಂಗಳಾದರೂ ಈ ಅಧಿಕಾಗಳ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ========== *ಹೇಳಿಕೆ ರಾಷ್ಟ್ರಕ್ಕೆ ಮಾದರಿ ಎಂಬ ಹೆಗ್ಗಳಿಕೆ ಪಡೆದಿದ್ದ ಗ್ರಾಮ ಪಂಚಾಯಿತಿಯೊಳಗೆ ಹೆಗ್ಗಣ ತುಂಬಿಕೊಂಡಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಚಿನ್ನಸ್ವಾಮಿಯ ವಿರುದ್ಧ ಕ್ರಮ ಕೈಗೊಳ್ಳಲು ಜಿಪಂ ಕಾರ್ಯನಿರ್ವಾಹಣಾಧಿಕಾರಿಗಳು ಏಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಚಿನ್ನಸ್ವಾಮಿಯನ್ನು ಕೂಡಲೇ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಿ. - ಖಾಸೀಂ ಜಿ.ಎಂ, ಗುಳಗಳಲೆ