ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಹೌದು. ಕುಷ್ಟಗಿಯ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 27 ಮಂದಿ ಸಿಬ್ಬಂದಿ ಇದ್ದು, ಬೆಂಕಿಯ ಅವಘಡಗಳ ಸುದ್ದಿ ಬಂದ ತಕ್ಷಣವೇ ಸಕಾಲಕ್ಕೆ ಹೋಗಿ ಬೆಂಕಿ ನಂದಿಸಲಾಗುತ್ತದೆ. ಕೆಲವೆಡೆ ಜಲವಾಹನ ಹೋಗದ, ಇಕ್ಕಟ್ಟು ಜಾಗಗಳಲ್ಲಿ ಗಿಡ, ಮರಗಳ ಕೊಂಬೆಗಳಿಂದ, ಹಸಿರೆಲೆಯಿಂದ, ಹಳೆಯ ಗೋಣಿಚೀಲಗಳಿಂದ ಬೆಂಕಿ ನಂದಿಸುತ್ತಿದ್ದಾರೆ.
ಒಂದೇ ಜಲವಾಹನ: ಕುಷ್ಟಗಿ ತಾಲೂಕಿನಲ್ಲಿ ಸುಮಾರು 173 ಹಳ್ಳಿಗಳು ಬರುತ್ತವೆ. ಇಲ್ಲಿ ಒಂದೇ ಜಲವಾಹನ ಇದ್ದು, ಏಕಾಏಕಿ ಎರಡು-ಮೂರು ಕಡೆ ಬೆಂಕಿ ಅವಘಡಗಳು ಕಾಣಿಸಿಕೊಂಡರೆ ತೊಂದರೆಯಾಗಬಹುದು. ಸರ್ಕಾರವು ಕುಷ್ಟಗಿ ಠಾಣೆಗೆ ಇನ್ನೊಂದು ಜಲವಾಹನ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.ಕಳೆದ ವರ್ಷ 127 ಅವಘಡಗಳು: ಕಳೆದ ವರ್ಷ 2022-23ನೇ ಸಾಲಿನಲ್ಲಿ ರೈತರ ಬಣವೆಗಳು, ಎಲೆಕ್ಟ್ರಿಕಲ್, ಗ್ಯಾಸ್ ಸಿಲಿಂಡರ್ ಸೋರಿಕೆ, ಪ್ರಾಣ ರಕ್ಷಣೆ ಸೇರಿದಂತೆ ನಾನಾ ವಿಧದ ಒಟ್ಟು 127 ಕಡೆ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ಬೆಲೆಬಾಳುವ ಆಸ್ತಿ-ಪಾಸ್ತಿ, ವಸ್ತುಗಳನ್ನು ಬೆಂಕಿಯಿಂದ ರಕ್ಷಿಸಲಾಗಿದೆ. ಕಳೆದ ವರ್ಷದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಕಡಿಮೆಯಾಗಿದೆ.
ಠಾಣೆಯಲ್ಲೇ ಬೋರ್‌ವೆಲ್: ಠಾಣಾ ಆವರಣದಲ್ಲಿ ಕೊಳವೆಬಾವಿ ಇದ್ದು, ಸಾಕಷ್ಟು ನೀರು ಲಭ್ಯವಿದೆ. ದಿನದ 24 ಗಂಟೆ ನೀರು ಸಂಗ್ರಹವಿದೆ. ಇಲ್ಲಿರುವ ಟ್ಯಾಂಕ್‌ನಲ್ಲಿ ಸುಮಾರು 20 ಸಾವಿರ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ.
ರೈತರು ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಯ ಕೆಳಗೆ ಬಣವೆ ಹಾಕಬಾರದು. ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಅಗ್ನಿ ಅವಘಡಗಳು ಕಂಡು ಬಂದ ತಕ್ಷಣ ನಮಗೆ ಮಾಹಿತಿ ನೀಡುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಹೇಳಿದರು.