ಬೆಂಗಳೂರು : ವಿಶ್ವದೆಲ್ಲೆಡೆ ಸೂಪರ್‌ ಎಲ್‌ನಿನೋ ಆತಂಕ ಆರಂಭವಾಗಿದ್ದು, ಅದರ ಪರಿಣಾಮ ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಕಾಣಿಸಿಕೊಂಡಿದೆ. ಇದರಿಂದಾಗಿ ಭೀಕರ ಬರದ ಛಾಯೆ ಉಂಟಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ.

ಕಳೆದೆರಡು ವರ್ಷಗಳ ಹಿಂದೆ (2024) ಎಲ್‌ನಿನೋ ಪರಿಣಾಮವಾಗಿ ಮುಂಗಾರು ಮಳೆ ಅಭಾವ ಉಂಟಾಗಿತ್ತು. ಆದರೆ, ಈ ಬಾರಿ ಸೂಪರ್‌ ಎಲ್‌ನಿನೋ ಸೃಷ್ಟಿಯಾಗಿರುವ ಕಾರಣ ಮಳೆಯ ತೀವ್ರ ಕೊರತೆ ಉಂಟಾಗಿದೆ. ಎರಡು ವರ್ಷಗಳ ಹಿಂದಿನ ಜು.4ಕ್ಕೆ ಮಳೆ ಕಡಿಮೆಯಿದ್ದರೂ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ 103.75 ಟಿಎಂಸಿ ಅಡಿಗಳಷ್ಟು ನೀರಿದ್ದು, ಒಟ್ಟು ಶೇ. 19.47ರಷ್ಟು ಭರ್ತಿಯಾಗಿದ್ದವು. ಅದೇ ಈ ವರ್ಷದ ಜು.4ಕ್ಕೆ ಅದೇ ಜಲಾಶಯಗಳಲ್ಲಿ ಕೇವಲ 66.62 ಟಿಎಂಸಿ ನೀರಿದ್ದು, ಶೇ.12.52ರಷ್ಟು ಭರ್ತಿಯಾಗಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿನ ಭಾರೀ ಅಭಾವ ಉಂಟಾಗುವ ಆತಂಕ ಎದುರಾಗಿದೆ.

13 ಡ್ಯಾಂಗಳಲ್ಲಿ ಶೇ.55ಕ್ಕಿಂತ ಕಡಿಮೆ ನೀರು:

ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ಪ್ರಮುಖ 22 ಜಲಾಶಯಗಳ ಪೈಕಿ ಕೆಆರ್‌ಎಸ್‌, ತುಂಗಭದ್ರಾ, ಆಲಮಟ್ಟಿ, ಮಲಪ್ರಭ ಅಣೆಕಟ್ಟು ಸೇರಿ 7 ಅಣೆಕಟ್ಟುಗಳಲ್ಲಿ ಶೇ.25ಕ್ಕಿಂತ ಕಡಿಮೆ ನೀರಿದೆ. ಉಳಿದಂತೆ 6 ಜಲಾಶಯಗಳಲ್ಲಿ ಶೇ. 25ರಿಂದ 55ರಷ್ಟು, 7 ಜಲಾಶಯಗಳಲ್ಲಿ ಶೇ. 55ರಿಂದ 75 ಹಾಗೂ ಎರಡು ಜಲಾಶಯಗಳಲ್ಲಿ (ವಾಣಿ ವಿಲಾಸ ಸಾಗರ ಮತ್ತು ಮುಲ್ಲಾಮಾರಿ ಕೆಳದಂಡೆ ಜಲಾಶಯ) ಮಾತ್ರ ಶೇ.75ರಿಂದ 100ರಷ್ಟು ನೀರು ಭರ್ತಿಯಾಗಿದೆ.


ಹಾಗೆಯೇ, ಬೆಂಗಳೂರು ಸೇರಿ ವಿವಿಧ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೆಆರ್‌ಎಸ್‌ ಜಲಾಶಯದಲ್ಲಿ 11.13 ಟಿಎಂಸಿ ಅಡಿಗಳಷ್ಟು ಮಾತ್ರ ನೀರಿದ್ದು, ಅದರಲ್ಲಿ 2.75 ಟಿಎಂಸಿ ಅಡಿ ನೀರು ಮಾತ್ರ ಬಳಕೆ ಮಾಡಬಹುದಾಗಿದೆ. ಉಳಿದ ನೀರು ಡೆಡ್‌ಸ್ಟೋರೇಜ್‌ ಆಗಿದೆ. ಅದೇ ರೀತಿ ಟಿಬಿ ಡ್ಯಾಂನಲ್ಲಿ 9.23 ಟಿಎಂಸಿ ಅಡಿಗಳಷ್ಟುನೀರಿದ್ದು, ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 3.07 ಟಿಎಂಸಿ ಅಡಿಗಳಷ್ಟು ಬಳಕೆ ಮಾಡಬಹುದಾಗಿದೆ. ಅಲಮಟ್ಟಿಯಲ್ಲಿ 20.68 ಟಿಎಂಸಿ ಅಡಿಗಳಷ್ಟು ನೀರಿದ್ದರೂ 3.07 ಟಿಎಂಸಿ ಅಡಿಗಳಷ್ಟು ನೀರು ಮಾತ್ರ ಬಳಸಲು ಸಾಧ್ಯವಿದೆ.

ಮುಂಗಾರು ಕೊರತೆ:

ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಸಾಮಾನ್ಯವಾಗಿ ಸರಾಸರಿ 199 ಮಿ.ಮೀ.ನಿಂದ 208 ಮಿ,ಮೀ.ವರೆಗೆ ಮಳೆ ಸುರಿಯುತ್ತದೆ. ಕಳೆದ ವರ್ಷ 203 ಮಿ.ಮೀ. ಮಳೆಯಾಗಿತ್ತು. ಅದೇ ಈ ವರ್ಷ ಜೂನ್‌ ತಿಂಗಳಲ್ಲಿ 124 ಮಿ.ಮೀ. ಮಾತ್ರ ಮಳೆ ಸುರಿದಿದೆ. ಇನ್ನು, ಜುಲೈನಲ್ಲಿ 271 ಮಿ.ಮೀ. ವಾಡಿಕೆ ಮಳೆಯಾಗಬೇಕು. ಸದ್ಯದ ಪರಿಸ್ಥಿತಿ ನೋಡಿದರೆ ಜುಲೈನಲ್ಲಿ ಮಳೆ ಕೊರತೆ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೂನ್‌ ಮತ್ತು ಜುಲೈನಲ್ಲಿ ಸುರಿಯುವ ಮುಂಗಾರು ಮಳೆಯು ರಾಜ್ಯದಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೆ ಸಹಕಾರಿ. ಆದರೆ, ಈ ಬಾರಿ ಶೇ.41ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಶೇ.20ರಿಂದ 63ರಷ್ಟು ಮಳೆ ಕೊರತೆ ಉಂಟಾಗಿದೆ. ಅಲ್ಲದೆ, ರಾಜ್ಯದ ತಾಲೂಕುಗಳ ಪೈಕಿ 153 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಒಟ್ಟಾರೆ ರಾಜ್ಯದ ಶೇ.75 ಭಾಗದಲ್ಲಿ ಮಳೆಯಾಗದೆ ಈಗಲೇ ಬರದ ಛಾಯೆ ಮೂಡುತ್ತಿದೆ.

ಮರುಕಳಿಸಲಿದೆಯೇ 1877ರ ಭೀಕರತೆ?

ಎಲ್‌ನಿನೋದಲ್ಲಿ ಮಳೆ ಕೊರತೆ ಸೃಷ್ಟಿಯಾದರೂ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಈ ವರ್ಷ ಸೂಪರ್‌ ಎಲ್‌ನಿನೋ ಸೃಷ್ಟಿಯಾಗಿದೆ. 1877ರಲ್ಲಿ ಇದೇ ಮಾದರಿಯಲ್ಲಿ ಸೂಪರ್‌ ಎಲ್‌ನಿನೋ ಸೃಷ್ಟಿಯಾಗಿ ತೀವ್ರ ಬರಗಾಲ ಉಂಟಾಗಿತ್ತು. ಈ ಬಾರಿಯೂ ಅದೇ ಮಾದರಿಯಲ್ಲಿ ಸೂಪರ್‌ ಎಲ್‌ನಿನೋ ಸೃಷ್ಟಿಯಾಗಿದ್ದು, ಮಳೆಯ ತೀವ್ರ ಅಭಾವದಿಂದ ಬರಗಾಲದ ಪರಿಣಾಮವೂ ತೀವ್ರವಾಗಿರಲಿದೆ ಎಂದು ಅಂದಾಜಿಸಲಾಗುತ್ತಿದೆ.