ಧಾರವಾಡ ಸೇರಿದಂತೆ ಇತರೆ ಕಡೆಗೂ ಮೋಡ ಬಿತ್ತನೆ ಮಾಡುವ ಕುರಿತು ಕ್ರಮಕೈಗೊಳ್ಳುತ್ತೇವೆ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಮೋಡಗಳು ಇರುವಾಗಲೇ ಮೋಡಬಿತ್ತನೆ ಮಾಡಿದರೆ ಅನುಕೂಲ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಧಾರವಾಡ:

ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಬರ ಪರಿಸ್ಥಿತಿ ಎದುರಾಗುತ್ತಿದೆ. ಇದನ್ನು ನೀಗಿಸಬೇಕೆಂದರೆ ಮೋಡ ಬಿತ್ತನೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರವಾಡ ಸೇರಿದಂತೆ ಇತರೆ ಕಡೆಗೂ ಮೋಡ ಬಿತ್ತನೆ ಮಾಡುವ ಕುರಿತು ಕ್ರಮಕೈಗೊಳ್ಳುತ್ತೇವೆ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಮೋಡಗಳು ಇರುವಾಗಲೇ ಮೋಡಬಿತ್ತನೆ ಮಾಡಿದರೆ ಅನುಕೂಲ. ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಾವೇರಿಯಲ್ಲಿ ಮೋಡಬಿತ್ತನೆ ಭಾನುವಾರದಿಂದಲೇ ಆರಂಭವಾದರೂ ಆಗಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಧಾರವಾಡ ಜಿಲ್ಲೆಯಲ್ಲಿ ಮಳೆ ಆಗದಿದ್ದರೂ ಒಂದೂವರೆ ತಿಂಗಳು ಕುಡಿಯುವ ನೀರಿನ ಸಮಸ್ಯೆ ಆಗಲಾರದು. ಈ ಮಧ್ಯೆ ಮಲಪ್ರಭೆಯ ಒಳಹರಿವು ಹೆಚ್ಚಿದ್ದರಿಂದ ಸ್ಟಾಕ್ ಸ್ಟೋರೆಜ್ ಕೂಡ ಅಧಿಕಗೊಳ್ಳಲಿದೆ. ಗ್ರಾಮೀಣ ಪ್ರದೇಶದಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಸ್ಥಳೀಯ ಶಾಸಕರೇ ಬಗೆಹರಿಸಲಿದ್ದಾರೆ. ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಅಗತ್ಯವಿದ್ದ ಕಡೆಗೆ ಟ್ಯಾಂಕರ್, ಬೋರ್‌ವೆಲ್‌ ಮೂಲಕ ನೀರು ಕೊಡಲಾಗುವುದು ಎಂದರು.

ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊತ್ತ ಎಲ್‌ ಆ್ಯಂಡ್‌ ಟಿ ಬಗ್ಗೆ ಬೆಳಗಾವಿ, ಧಾರವಾಡ ಸೇರಿದಂತೆ ಅಪಸ್ವರವಿದೆ. ಬರುವ ಡಿಸೆಂಬರ್‌ ವರೆಗೂ ಅವರಿಗೆ ಕಾಮಗಾರಿ ಮುಗಿಸಲು ಅವಧಿ ವಿಸ್ತರಿಸಲಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳಿಗೆ ಆಗುತ್ತಿರುವ ಹಾನಿ ಬಗ್ಗೆ ಅಧಿಕಾರಿಗಳು ನೀಡಿದ ಮಾಹಿತಿ ಸಮಂಜಸವಾಗಿಲ್ಲ. ಇನ್ನು 10 ದಿನ ಮಳೆ ಆಗದಿದ್ದರೆ ಬೆಳೆ ನಷ್ಟ ಪ್ರಮಾಣ ಹೆಚ್ಚಲಿದೆ. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ ಬೆಳೆಹಾನಿ ಪರಿಹಾರ ಕುರಿತಂತೆ ಸರಕಾರಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕೋಟ್‌...

ಎಸ್‌ಐಆರ್‌ಗೆ ಕಾಂಗ್ರೆಸ್ ವಿರೋಧ ಮಾಡುತ್ತಿಲ್ಲ. ಅರ್ಹ ಮತದಾರರನ್ನು ಪರಿಗಣಿಸಬೇಕು ಎಂಬುದು ನಮ್ಮ ನಿಲುವು.

ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ