ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆ ಮಾಡಿ, ಸ್ವಂತ ಊರಿನಲ್ಲಿಯೇ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶ ಕಲ್ಪಿಸುವುದು ಹೊಸ ಯೋಜನೆಯ ಪ್ರಮುಖ ಉದ್ದೇಶ
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಗ್ರಾಮೀಣ ಭಾರತದ ಆರ್ಥಿಕ ಸ್ವಾವಲಂಬನೆಗೆ ಹೊಸ ಅಧ್ಯಾಯ ಬರೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ ಅಂಡ್ ಅಜೀವಿಕಾ ಮಿಷನ್ (VBGRAM) ಯೋಜನೆ ಜು.1ರಿಂದ ಅಧಿಕೃತವಾಗಿ ಜಾರಿಯಾಗಿದೆ.ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿ ವಿಸ್ತರಿಸಿರುವ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗ ಖಾತರಿ ನೀಡುವ ಮೂಲಕ ಬಡ ಕಾರ್ಮಿಕರ ಬದುಕಿಗೆ ಮತ್ತಷ್ಟು ಭದ್ರತೆ ಒದಗಿಸಿದ್ದು, ದಿನಗೂಲಿ ₹370 ರಿಂದ ₹382ಕ್ಕೆ ಹೆಚ್ಚಿಸಿರುವುದು ಗ್ರಾಮೀಣ ಕೂಲಿಕಾರರಿಗೆ ಮತ್ತೊಂದು ಸಂತಸದ ಸುದ್ದಿಯಾಗಿದೆ.
ಕುಷ್ಟಗಿ ತಾಲೂಕಿನಲ್ಲೂ ಈ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಗ್ರಾಪಂದಿಂದ ತಾಲೂಕು ಮಟ್ಟದವರೆಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆ ಬಲಪಡಿಸಲಾಗಿದೆ ಎಂದು ತಾಪಂ ಇಒ ಅಮರೇಶ ತಿಳಿಸಿದ್ದಾರೆ.ವಲಸೆ ತಡೆಯುವುದೇ ಉದ್ದೇಶ: ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆ ಮಾಡಿ, ಸ್ವಂತ ಊರಿನಲ್ಲಿಯೇ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶ ಕಲ್ಪಿಸುವುದು ಹೊಸ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿರತೆ ಹೆಚ್ಚುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ವೇಗ ಸಿಗುವ ನಿರೀಕ್ಷೆಯಿದೆ.
ಮನರೇಗಾ ಕಾರ್ಡ್‌ಗಳೇ ಮಾನ್ಯ: ಹೊಸ ಯೋಜನೆ ಜಾರಿಯಾದರೂ ಮನರೇಗಾ ಯೋಜನೆಯಡಿ ಈಗಾಗಲೇ ನೀಡಿರುವ ಉದ್ಯೋಗ ಚೀಟಿಗಳು ಮಾನ್ಯವಾಗಿರಲಿವೆ. ಹೀಗಾಗಿ ಕಾರ್ಮಿಕರು ಹೊಸದಾಗಿ ನೋಂದಣಿ ಮಾಡಿಸಬೇಕಾದ ಅಗತ್ಯವಿಲ್ಲ. ಜೂ.30ರೊಳಗೆ ಆರಂಭಗೊಂಡ ಕಾಮಗಾರಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಲು ಅವಕಾಶ ನೀಡಲಾಗಿದೆ.ಇ-ಕೆವೈಸಿ ಕಡ್ಡಾಯ: ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯಂತೆ ಎಲ್ಲ ನೋಂದಾಯಿತ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಬಾಕಿ ಉಳಿದಿರುವ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕಿದ್ದು, ಈ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉದ್ಯೋಗ ನೀಡುವುದರ ಜತೆಗೆ ಕೆರೆ, ರಸ್ತೆ, ಕುಡಿವ ನೀರು, ಜಲ ಸಂರಕ್ಷಣೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಲಿದೆ. ಇದರಿಂದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯಾಗುವುದರ ಜತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಹೊಸ ಚೈತನ್ಯ ದೊರೆಯಲಿದೆ.ಯೋಜನೆಯ ಬದಲಾವಣೆಯಿಂದ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುವುದಿಲ್ಲ. ಎಲ್ಲ ಅರ್ಹರಿಗೆ ನಿರಂತರ ಕೆಲಸ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
125 ದಿನಗಳ ಉದ್ಯೋಗ ₹382 ದಿನಗೂಲಿ ಹಾಗೂ ಗ್ರಾಮದಲ್ಲಿಯೇ ಜೀವನೋಪಾಯದ ಅವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಕುಟುಂಬಗಳ ಆರ್ಥಿಕ ಭದ್ರತೆ ಬಲಪಡಿಸುವುದು ಹೊಸ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಕುಷ್ಟಗಿ ತಾಪಂ ಇಒ ಅಮರೇಶ್ ತಿಳಿಸಿದ್ದಾರೆ.