ಪ್ರಕಾಶ ರಾಯ್ಕರ್ ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಪ್ರಶಾಂತ ನಗರದಲ್ಲಿರುವ ತಮ್ಮ ಮೂರು ಮನೆಗಳನ್ನು ಒತ್ತೆ ಇಟ್ಟು ₹1.38 ಕೋಟಿ ಸಾಲ ಪಡೆದಿದ್ದರು. ಸರಿಯಾದ ಸಮಯಕ್ಕೆ ಹಣ ಪಾವತಿಸದ ಕಾರಣ ಸಾಲ ಬಡ್ಡಿ ಸೇರಿ ₹2.30 ಕೋಟಿಗೆ ತಲುಪಿತ್ತು.
ಗಂಗಾವತಿ: ಸಾಲಗಾರರ ಕಿರುಕುಳದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ಕೊಪ್ಪಳ ರಸ್ತೆಯ ಪ್ರಶಾಂತ ನಗರದ ಮನೆಯೊಂದರಲ್ಲಿ ಶನಿವಾರ ನಡೆದಿದೆ.
ನಗರದ ಕಾಮಾಕ್ಷಿ ಜ್ಯುವೆಲ್ಲರ್ಸ್ ಅಂಗಡಿ ಮಾಲಿಕ ಪ್ರಕಾಶ ರಾಯ್ಕರ್ (54) ಪತ್ನಿ ಪ್ರಭಾ (46) ಪುತ್ರ ಶಶಾಂಕ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಇವರು ಖಾಸಗಿ ಬ್ಯಾಂಕ್ ಸೇರಿದಂತೆ ಕೆಲ ವ್ಯಕ್ತಿಗಳಿಂದ ಸುಮಾರು ₹5 ಕೋಟಿಗೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸಾಲಗಾರರ ಕಿರುಕುಳದಿಂದ ಬೇಸತ್ತು ಜಿಗುಪ್ಸೆಗೊಂಡಿದ್ದರು.ಮನೆ ಸೀಜ್, ನೊಂದ ಕುಟುಂಬ: ಪ್ರಕಾಶ ರಾಯ್ಕರ್ ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕ್‌ನಲ್ಲಿ ಪ್ರಶಾಂತ ನಗರದಲ್ಲಿರುವ ತಮ್ಮ ಮೂರು ಮನೆಗಳನ್ನು ಒತ್ತೆ ಇಟ್ಟು ₹1.38 ಕೋಟಿ ಸಾಲ ಪಡೆದಿದ್ದರು. ಸರಿಯಾದ ಸಮಯಕ್ಕೆ ಹಣ ಪಾವತಿಸದ ಕಾರಣ ಸಾಲ ಬಡ್ಡಿ ಸೇರಿ ₹2.30 ಕೋಟಿಗೆ ತಲುಪಿತ್ತು. ಈ ಕಾರಣಕ್ಕೆ ಮನೆಗಳನ್ನು ಹರಾಜಿಗೆ ಹಾಕಿದ್ದರು. ಈ ವೇಳೆ ನಗರದ ಹಿರೇಜಂತಗಲ್ ನ ಜೆ.ನಾಗರಾಜ್ ಎನ್ನುವವರು ಹರಾಜಿನ ಮೂಲಕ ಮನೆ ಖರೀದಿಸಿದ್ದರು. ಇವರು ಸಹ ಸಾಲ ಮರುಪಾತಿಸದ ಕಾರಣ ಬ್ಯಾಂಕ್ ನವರು ಮೂರು ಮನೆಗಳನ್ನು ಸೀಜ್ ಮಾಡಿ ತಮ್ಮ ವ್ಯಾಪ್ತಿಗೆ ಪಡೆದಿದ್ದರು.
ಸೀಜ್ ಮಾಡಿದ ಮನೆಯಲ್ಲಿ ಆತ್ಮಹತ್ಯೆ: ಸಾಲ ಬಾಧೆಗೆ ಮನನೊಂದ ಪ್ರಕಾಶ ರಾಯ್ಕರ್, ಪತ್ನಿ ಪ್ರಭಾ ಮತ್ತು ಪುತ್ರ ಶಶಾಂಕ ಬ್ಯಾಂಕ್‌ನವರು ಸೀಜ್ ಮಾಡಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆ ಸೀಜ್ ಮಾಡಿದ್ದರೂ ಹಿಂದಿನ ಬಾಗಿಲು ಮುರಿದು ಒಳ ಹೋಗಿ ನೇಣು ಹಾಕಿಕೊಂಡಿದ್ದಾರೆ. ಈ ಘಟನೆ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆದಿದೆ. ಮನೆ ಮುಂಭಾಗದಲ್ಲಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಬಂದು ನೋಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷಗಳಿಂದ ಸಾಲಗಾರರ ಕಿರುಕುಳ ನಡೆದಿದ್ದರಿಂದ ಕೆಲವರ ಜತೆ ಜಗಳ, ರಾಜಿ ಸಂಧಾನ ನಡೆದಿತ್ತು.ಬೆಂಗಳೂರಿನಲ್ಲಿ ಇಂಜನೀಯರ್ ಶಿಕ್ಷಣ ಪಡೆಯುತ್ತಿದ್ದ ಶಶಾಂಕ ಮೂರು ದಿನಗಳ ಹಿಂದೆ ಬಂದು ತಂದೆ, ತಾಯಿ ಜತೆಗೆ ಇದ್ದ. ಈ ಸಮಯದಲ್ಲೂ ಸಾಲಗಾರರ ಕಿರುಕುಳ ಹೆಚ್ಚಾಗಿದ್ದಕ್ಕೆ ಮೂವರು ತಿರ್ಮಾನಿಸಿ ಆತ್ಮಹತ್ಯೆಗೆ ಮುಂದಾಗಲು ಕಾರಣ ಎನ್ನಲಾಗಿದೆ. ಕಳೆದ ವರ್ಷ ಪ್ರಕಾಶರ ಇನ್ನೋರ್ವ ಪುತ್ರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು.
ಪರಿಶೀಲನೆ: ಮೂವರ ಶವಗಳನ್ನು ಕೊಪ್ಪಳ ವಿಧಿ ವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸಿತು. ನೇಣಿಗೆ ಕಾರಣ ಏನು?, ಯಾವ ರೀತಿ ಕೃತ್ಯ ನಡೆಯಿತು, ಮನೆಯಲ್ಲಿ ಯಾರು ಇದ್ದರು ಸೇರಿದಂತೆ ವಿವಿಧ ರೀತಿಯ ಮಾದರಿಯಲ್ಲಿ ತಪಾಸಣೆ ನಡೆದ ನಂತರ ಮರಣೋತ್ತರ ಪರೀಕ್ಷೆಗೆ ಕಳಿಸಿ ಕೊಡಲಾಯಿತು.ಜನ ಜಂಗಳಿ:ಮೂವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹರಡುತ್ತಿದ್ದಂತೆ ಜನರು ತಂಡೋಪತಂಡವಾಗಿ ಆಗಮಿಸಿತು. ಕೊಪ್ಪಳ ರಸ್ತೆ ಮಾರ್ಗದಲ್ಲಿ ನೂರಾರು ವಾಹನ ಮತ್ತು ಸಾರ್ವಜನಿಕರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ರಾಮ್ ಎಲ್ ಅರಸಿದ್ದಿ, ಡಿವೈಎಸ್ಪಿ ಜಾಯಪ್ಪ ನ್ಯಾಮೆಗೌಡ, ಪಿಐ ಪ್ರಕಾಶ ಯಾತನೂರು ಆಗಮಿಸಿ ತನಿಖೆ ನಡೆಸಿದರು.
ಸಾಲದ ಕಿರುಕುಳಕ್ಕೆ ಮೂವರು ಆತ್ಮಹತ್ಯೆ: ಎಸ್ಪಿಗಂಗಾವತಿಯ ಪ್ರಶಾಂತ ನಗರದಲ್ಲಿ ಸಾಲಗಾರರ ಕಿರುಕುಳಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಎಸ್ಪಿರಾಮ್ ಎಲ್. ಅರಸಿದ್ದಿ ಹೇಳಿದರು. ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮಾನ್ವಿ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ನಾಗರಾಜ್ ಜಂತಗಲ್ ಎನ್ನುವವರ ಬಳಿ ಸಾಲ ಪಡೆದಿದ್ದು, ಇದನ್ನು ಪಾವತಿಸದೇ ಮನನೊಂದು ಕಾಮಾಕ್ಷಿ ಜ್ಯುವೆಲ್ಲರ್ಸ್ ಮಾಲಿಕ ಪ್ರಕಾಶ ರಾಯ್ಕರ್, ಪತ್ನಿ ಪ್ರಭಾ ಮತ್ತು ಪುತ್ರ ಶಶಾಂಕ್ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.