ತಾಲೂಕಿನ ಹಟ್ಟಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಪರಿಸ್ಥಿತಿ ಅಭ್ಯಸಿಸಿ, ಇಲ್ಲಿ ಜಿಲ್ಲಾ ಆಸ್ಪತ್ರೆ ಮಾಡಿದಲ್ಲಿ ರೋಗಿಗಳಿಗೆ ಅನುಕೂಲವಾಗಬಹುದೇ ಎನ್ನುವ ವಿಷಯವಾಗಿ ನಾನು ಮತ್ತು ಶಾಸಕರು, ಅಧಿಕಾರಿಗಳು ಚರ್ಚೆ ನಡೆಸುತ್ತೇವೆ.

ರೋಗಿಗಳಿಗೆ ಉತ್ತಮ ಸೇವೆ ನೀಡಿ ಎಂದ ಆರೋಗ್ಯ ಸಚಿವ

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಹಟ್ಟಿಕೇರಿಯಲ್ಲಿ ಜಿಲ್ಲಾಸ್ಪತ್ರೆ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಪರಿಸ್ಥಿತಿ ಅಭ್ಯಸಿಸಿ, ಇಲ್ಲಿ ಜಿಲ್ಲಾ ಆಸ್ಪತ್ರೆ ಮಾಡಿದಲ್ಲಿ ರೋಗಿಗಳಿಗೆ ಅನುಕೂಲವಾಗಬಹುದೇ ಎನ್ನುವ ವಿಷಯವಾಗಿ ನಾನು ಮತ್ತು ಶಾಸಕರು, ಅಧಿಕಾರಿಗಳು ಚರ್ಚೆ ನಡೆಸುತ್ತೇವೆ. ಸೂಕ್ತ ಎಂದಾದಲ್ಲಿ ಮುಂದಿನ ಕ್ರಮ ಕೈಗೊಳ್ಳೋಣ. ಇಲ್ಲ ಎಂತಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅಭಿವೃದ್ಧಿಪಡಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿಯ ವಿಶಾಲವಾದ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಪ್ರದೇಶ ಜಿಲ್ಲಾ ಆಸ್ಪತ್ರೆ ಮಾಡಲು ಸೂಕ್ತವಾಗಿದೆಯೇ ಎನ್ನುವುದನ್ನು ಕುಲಂಕುಶವಾಗಿ ಅಭ್ಯಸಿಸಬೇಕಾಗಿದೆ.

ಇಲ್ಲಿಗೆ ಜಿಲ್ಲೆಯ ಮೂಲೆ ಮೂಲೆಗಳಿಂದ ರೋಗಿಗಳು ಬರಲು ಅನುಕೂಲವಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಹೌದು ಎಂದಾದಲ್ಲಿ ಇಲ್ಲಿಯೇ ಜಿಲ್ಲಾಸ್ಪತ್ರೆ ಮಾಡಲು ಸರಕಾರ ಸಿದ್ದವಿದೆ ಎಂದರು.

ಸೌಕರ್ಯ ಮತ್ತು ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿದೆಯೇ ಎಂದು ವೈದ್ಯಾಧಿಕಾರಿ ಡಾ ಅರ್ಚನಾ ನಾಯ್ಕರನ್ನು ಪ್ರಶ್ನಿಸಿದರು.

ಈ ಸಂದರ್ಭ ಶಾಸಕ ಸತೀಶ ಸಚಿವರೊಂದಿಗೆ ಚರ್ಚೆ ನಡೆಸಿದರು. ಡಿಸಿಸಿ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ಸಹಾಯಕ ಆಯುಕ್ತ ಶ್ರವಣ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕ ಆರೋಗ್ಯ ಅಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳು ಕಾಂಗ್ರೆಸ್ ಪ್ರಮುಖರು, ಸಾರ್ವಜನಿಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಶೂಶ್ರಷಕಿಯರು ಉಪಸ್ಥಿತರಿದ್ದರು.ಮಹಿಳೆಗೆ ಪ್ರಶ್ನೆ

ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ಮಹಿಳೆಯನ್ನು ಪ್ರಶ್ನಿಸಿದ ಸಚಿವರು ಇಲ್ಲಿ ಯಾವ ಕಾಯಿಲೆಗಾಗಿ ಬಂದಿದ್ದೀರಿ. ಔಷಧಿ ದೊರೆಯುತ್ತದೆಯೇ,? ಸಮಸ್ಯೆ ಏನಾದರೂ ಇದೆಯೇ? ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಾರೆಯೇ? ಎಂದು ಪ್ರಶ್ನಿಸಿದರು.