ಕನ್ನಡಪ್ರಭ ವಾರ್ತೆ ಕುಮಟಾ

ಪೂರಕ ಸೌಕರ್ಯಗಳಿಲ್ಲದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಟ್ರಾಮಾಸೆಂಟರ್ ಮಾಡಿದರೆ ಜನರಿಗೆ ಪ್ರಯೋಜನವಿಲ್ಲ. ಕುಮಟಾದಲ್ಲಿ ಮೂರನೇ ಹಂತದ ಟ್ರಾಮ ಸೆಂಟರ್ ನಿರ್ಮಾಣಗೊಂಡಿದ್ದರೂ ವೈದ್ಯರು ಸಿಗುತ್ತಿಲ್ಲ. ಹೀಗಾಗಿ ಕಾರವಾರ ಮೆಡಿಕಲ್ ಕಾಲೇಜಿನಲ್ಲೇ ಉತ್ತಮ ಟ್ರಾಮಾ ಸೆಂಟರ್ ಮೊದಲು ಸೇವೆ ನೀಡಲಿ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ಘಟಕ, ಐಸಿಯು, ಹೊಸದಾಗಿ ನಿರ್ಮಾಣಗೊಂಡ ಟ್ರಾಮಾ ಸೆಂಟರ್‌ಗಳನ್ನು ಪರಿಶೀಲಿಸಿ, ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಶಾಸಕ ದಿನಕರ ಶೆಟ್ಟಿ ಹಲವು ಬಾರಿ ವಿಧಾನಸಭೆಯಲ್ಲೇ ಹೇಳಿದ್ದಾರೆ. ಆದರೆ ಕಾರವಾರದಲ್ಲಿ ಮೆಡಿಕಲ್ ಕಾಲೇಜು ಆಗಿರುವುದರಿಂದ ಅಲ್ಲಿಯೇ ಎಲ್ಲ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಮಾಡಲಾಗುತ್ತಿದೆ. ಇಲ್ಲಿಂದ ಆ್ಯಂಬುಲೆನ್ಸ್ ಮೂಲಕ ಒಂದು ಘಂಟೆಯಲ್ಲಿ ಕಾರವಾರ ತಲುಪಬಹುದು. ಇಲ್ಲಿ ಥರ್ಡ್ ಸ್ಟೇಜ್ ಟ್ರಾಮಾ ಸೆಂಟರ್ ಆಗುತ್ತಿದೆ. ನಂತರ ಸೆಕೆಂಡ್ ಸ್ಟೇಜ್ ಫಸ್ಟ್ ಸ್ಟೇಜ್ ಮಾಡೋಣ, ಮುಂದೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಟ್ರಾಮಾ ಸೆಂಟರ್ ಇದಾಗುವಂತೆ ಪ್ರಯತ್ನಿಸೋಣ. ಬಳಿಕ ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮಾಡುವ ಬಗ್ಗೆ ಪರಿಶೀಲಿಸೋಣ. ಕೇವಲ ಕಟ್ಟಡ ಕಟ್ಟಿದರೆ ಆಗದು. ಸಂಬಂಧಿಸಿದ ವೈದ್ಯರು ಇತರ ಸಿಬ್ಬಂದಿ ಮುಂತಾದವು ಬೇಕಾಗುತ್ತದೆ ಎಂದರು.

ಗುತ್ತಿಗೆ ಆಧಾರಿತ ವೈದ್ಯಕೀಯ ಸಿಬ್ಬಂದಿ ಕಾಯಂಗೊಳಿಸುವ ಕುರಿತು ಪ್ರತಿಕ್ರಿಯಿಸಿದ ಸಚಿವ ಖಾದರ್, ಗುತ್ತಿಗೆ ಆಧಾರದಲ್ಲಿ ಇದ್ದವರನ್ನು ಯಾರೇ ಮಂತ್ರಿಯಾದರೂ ಕಾಯಂ ಮಾಡಲು ಸಾಧ್ಯವಿಲ್ಲ. ಯಾರಾದರೂ ಕಾಯಂ ಮಾಡಲು ಹಣ ಕೇಳಿದರೆ ಕೊಡಬೇಡಿ. ಆದರೆ ನೇಮಕಾತಿ ವೇಳೆಗೆ ಈಗ ಗುತ್ತಿಗೆ ಆಧಾರದಲ್ಲಿದ್ದವರಿಗೆ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಯೋಚಿಸುತ್ತಿದ್ದು, ಎಂ.ಬಿ.ಬಿ.ಎಸ್ ವೈದ್ಯರನ್ನು ಸಹ ಕಾಯಂಗೊಳಿಸಲು ಪ್ರಯತ್ನಿಸಲಾಗುವುದು ಎಂದರು.


ಖಾಸಗಿ ಆಸ್ಪತ್ರೆಗಳು ಸರ್ಕಾರದ ಸ್ಕೀಮ್‌ಗಳಿದ್ದರೂ ಚಿಕಿತ್ಸೆಗೆ ಹಣ ಪಡೆದರೆ ಇಲಾಖೆಯ ಟೋಲ್ ಫ್ರೀ ನಂಬರಿಗೆ ಕರೆ ಮಾಡಿ ದೂರು ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ರೋಗಿಗಳಿಗೆ ತೊಂದರೆ ಆದರೆ ನನ್ನ ಕಚೇರಿಗೆ ತಿಳಿಸಿ ಎಂದರು. ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ ದುರಸ್ತಿಗೆ ಶೀಘ್ರ ಕ್ರಮವಹಿಸಬೇಕು. ವೈದ್ಯಕೀಯ ಉಪಕರಣಗಳಿಗೆ ಚಿಕ್ಕ ಮೊತ್ತದ ಪ್ರಸ್ತಾವನೆ ಕಳುಹಿಸಿರುವುದು ಬಾಕಿ ಇದ್ದಲ್ಲಿ ಕೂಡಲೇ ಹಣ ಮಂಜೂರಿ ಮಾಡುತ್ತೇನೆ ಎಂದರು.

ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜತೆ ಸಭೆಯಲ್ಲಿ ಕುಂದುಕೊರತೆ ಪರಿಶೀಲಿಸಿದರು. ಶಾಸಕ ದಿನಕರ ಶೆಟ್ಟಿ ಕ್ಷೇತ್ರದ ಆರೋಗ್ಯ ಕ್ಷೇತ್ರದ ಅಗತ್ಯತೆಗಳನ್ನು ಸಚಿವರಿಗೆ ಮನವರಿಕೆ ಮಾಡಿದರು.

ಭಟ್ಕಳ ಶಾಸಕ ಮಂಕಾಳ ವೈದ್ಯ, ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್, ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಡಿಎಚ್‌ಒ ಡಾ. ಸಂಜಯ ದೊಡ್ಮನಿ, ಟಿಎಚ್‌ಒ ಡಾ. ಆಜ್ಞಾ ನಾಯಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ತಾಲೂಕಾಧ್ಯಕ್ಷ ಭುವನ ಭಾಗ್ವತ ಇತರರಿದ್ದರು.